ಡಿ.7ರಿಂದ ಕರ್ನಾಟಕ- ಉತ್ತರ್‌ಕಾಂಡ ನಡುವೆ ಅಂತರ್‌ರಾಜ್ಯ ಯುವ ವಿನಿಮಯ ಕಾರ್ಯಕ್ರಮ

Update: 2018-12-06 17:27 GMT

ಉಡುಪಿ, ಡಿ.6: ರಾಷ್ಟ್ರಮಟ್ಟದ ಯುವವಿನಿಮಯ ಕಾರ್ಯಕ್ರಮದಂತೆ ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಆಯ್ದ 50 ಯುವಜನರು ಹಾಗೂ ಉತ್ತರಕಾಂಡದ 50 ಮಂದಿ ಯುವಜನತೆ ಡಿ.7ರಿಂದ 21ರವರೆಗೆ ನಡೆಯುವ ವಸತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿಸೋಜ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಏಕ್ ಭಾರತ್ ಶ್ರೇಷ್ಠ್ ಭಾರತ ಕಾರ್ಯಕ್ರಮದ ಅಂಗವಾಗಿ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮವನ್ನು ಪ್ರತಿ ವರ್ಷ ಬೇರೆ ಬೇರೆ ರಾಜ್ಯಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಇದರ ಮುಖ್ಯ ಉದ್ದೇಶ ರಾಷ್ಟ್ರೀಯ ಭಾವೈಕ್ಯತೆಯನ್ನು ವ್ಯವಸ್ಥಿತವಾಗಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಸ್ಪರ ಸಾಂಸ್ಕೃತಿಕ, ಸಾಂಪ್ರದಾಯಿಕ, ವೈವಿಧ್ಯತೆಯನ್ನುತೋರಿಕೆ ಹಾಗೂ ಅರ್ಥೈಸುವ ಜೊತೆಗೆ ಒಂದು ಭಾವನಾತ್ಮಕ ವೇದಿಕೆಯನ್ನು ಒದಗಿಸುವುದಾಗಿದೆ ಎಂದು ಡಿಸೋಜ ನುಡಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಭಾಷಣ, ಪ್ರಬಂಧ ಹಾಗೂ ರಸಪ್ರಶ್ನೆಯನ್ನು ಆಯೋಜಿಸಲಾಗುತ್ತದೆ. ವಿವಿಧ ಪ್ರದೇಶಗಳ ಆರೋಗ್ಯ, ಶೈಕ್ಷಣಿಕ, ತಾಂತ್ರಿಕ, ಔದ್ಯೋಗಿಕ ವಿನಿಮಯ ಈ ಪ್ರವಾಸದಲ್ಲಿ ನಡೆಯಲಿದೆ.

ಇದೀಗ ಉತ್ತರಖಂಡದ 50 ಮಂದಿ ಆಯ್ದ ಯುವಜನತೆ ಉಡುಪಿಯಲ್ಲಿ ನಡೆಯುವ 15 ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳುವರು. ಇದಕ್ಕೆ ಕರ್ನಾಟಕದಿಂದಲೂ 50 ಮಂದಿ ಯುವಜನತೆಯನ್ನು ಆಯ್ಕೆ ಮಾಡಲಾಗಿದೆ. ಈ 100 ಮಂದಿ ಶಿಬಿರದಲ್ಲಿ ಒಟ್ಟಾಗಿ ಪಾಲ್ಗೊಳ್ಳುವರು. ಮುಂದೆ ಕರ್ನಾಟಕದ ಇದೇ 50 ಮಂದಿ ಯುವಕ-ಯುವತಿಯರು ಫೆ.ತಿಂಗಳಲ್ಲಿ ಉತ್ತರಖಂಡಕ್ಕೆ ತೆರಳಿ ಅಲ್ಲಿ ಆಯೋಜಿಸುವ 15 ದಿನಗಳ ಶಿಬಿರದಲ್ಲಿ ಭಾಗವಹಿಸುವರು ಎಂದರು.

ರಾಜ್ಯದ 50 ಮಂದಿ ಯುವಕ-ಯುವತಿಯರನ್ನು ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಕಾರವಾರ, ಮೈಸೂರಿನಿಂದ ತಲಾ 10 ಮಂದಿಯಂತೆ ಆಯ್ಕೆ ಮಾಡಲಾಗಿದೆ. ಅಂತರ ರಾಜ್ಯ ವಿನಿಯಮ ಕಾರ್ಯಕ್ರಮದ ಉದ್ಘಾಟನೆ ಡಿ.10ರಂದು ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ನಡೆಯಲಿದೆ ಎಂದು ವಿಲ್ಫ್ರೆಡ್ ಡಿಸೋಜ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News