ಕೆರೆಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯದ ಧೋರಣೆ: ಕರ್ನಾಟಕ ಸರಕಾರಕ್ಕೆ ದಂಡ ವಿಧಿಸಿದ ಎನ್‌ಜಿಟಿ

Update: 2018-12-06 17:40 GMT

ಹೊಸದಿಲ್ಲಿ, ಡಿ.6: ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳನ್ನು ಸಂರಕ್ಷಿಸುವ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಬಿಬಿಎಂಪಿ ಹಾಗೂ ಕರ್ನಾಟಕ ಸರಕಾರವನ್ನು ತರಾಟೆಗೆ ಎತ್ತಿಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ), ಒಟ್ಟು 75 ಕೋಟಿ ರೂ. ದಂಡ ವಿಧಿಸಿದೆ. ಅಲ್ಲದೆ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 500 ಕೋಟಿ ರೂ. ಮೀಸಲಿಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಬೆಳ್ಳಂದೂರು, ಅಗರ ಹಾಗೂ ವರ್ತೂರು ಕೆರೆಗಳ ನೀರನ್ನು ಸ್ವಚ್ಛಗೊಳಿಸುವ ಯೋಜನೆಗೆ ಈ ಹಣವನ್ನು ಬಳಸುವಂತೆ ಎನ್‌ಜಿಟಿ ತಿಳಿಸಿದೆ.

ವಿವೇಚನೆಯಿಲ್ಲದೆ ನಡೆಸಿರುವ ಕಾಮಗಾರಿಗಳಿಂದಾಗಿ ಚರಂಡಿಯ ನೀರು ಕೆರೆಯನ್ನು ೆ ನಿರಂತರವಾಗಿ ಸೇರುತ್ತಿದೆ. ಆದ್ದರಿಂದ ಕೆರೆಗಳ ಜೀರ್ಣೋದ್ಧಾರ ಪ್ರಕ್ರಿಯೆಗೆ 50 ಕೋಟಿ ರೂ.ಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಜಮೆ ಮಾಡುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪೀಠವು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅಲ್ಲದೆ ಎನ್‌ಜಿಟಿಯ ಈ ಹಿಂದಿನ ಆದೇಶವನ್ನು ಕಾರ್ಯಗತಗೊಳಿಸಲು ವಿಫಲವಾಗಿರುವ ಅಧಿಕಾರಿಗಳನ್ನು ಗುರುತಿಸುವಂತೆ ರಾಜ್ಯ ಸರಕಾರಕ್ಕೆ ತಿಳಿಸಿದೆ. ಇದೇ ವೇಳೆ ಪರಿಸರ ಪರಿಹಾರ ಮೊತ್ತವಾಗಿ 25 ಕೋಟಿ ರೂ.ಯನ್ನು ಜಮೆ ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ(ಬಿಬಿಎಂಪಿ)ಗೆ ಸೂಚಿಸಿದೆ. ಅಲ್ಲದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳನ್ನು ಒಳಗೊಂಡ, ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದ್ದು ತಿಂಗಳೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ತಿಳಿಸಲಾಗಿದೆ. ಬೆಳ್ಳಂದೂರು ಕೆರೆಯಲ್ಲಿ ನಿರಂತರ ಬೆಂಕಿ ಹಾಗೂ ನೊರೆಯಿಂದ ಆತಂಕ ಮೂಡಿರುವುದನ್ನು ಉಲ್ಲೇಖಿಸಿದ ಎನ್‌ಜಿಟಿ, ಇಂತಹ ಪ್ರಕರಣಗಳ ನಿರ್ವಹಣೆಗೆ ಕಾರ್ಯನೀತಿಯನ್ನು ರೂಪಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News