ರೊಹಿಂಗ್ಯಾ ಮುಸ್ಲಿಮರ ಬಗ್ಗೆ ಮ್ಯಾನ್ಮಾರ್ ಸಚಿವರಿಂದ ‘ಬೇವಾಬ್ದಾರಿಯುತ ಹೇಳಿಕೆ’: ಬಾಂಗ್ಲಾದೇಶ ಕಿಡಿ

Update: 2018-12-06 17:41 GMT

ಢಾಕಾ, ಡಿ. 6: ರೊಹಿಂಗ್ಯಾ ಮುಸ್ಲಿಮರ ಬಗ್ಗೆ ಮ್ಯಾನ್ಮಾರ್‌ನ ಧಾರ್ಮಿಕ ಸಚಿವರು ನೀಡಿರುವ ‘ಬೇವಾಬ್ದಾರಿಯುತ ಹೇಳಿಕೆ’ಯನ್ನು ಖಂಡಿಸಲು ಬಾಂಗ್ಲಾದೇಶ ಬುಧವಾರ ಆ ದೇಶದ ರಾಯಭಾರಿಯನ್ನು ಕರೆಸಿಕೊಂಡಿತು ಹಾಗೂ ಸಚಿವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿತು ಎಂದು ಬಾಂಗ್ಲಾದೇಶದ ವಿದೇಶ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮರು, ಮರಳಿ ಮ್ಯಾನ್ಮಾರ್‌ನತ್ತ ಸಾಗುವಂತೆ ಅವರ ‘ತಲೆತಿರುಗಿಸಲಾಗುತ್ತಿದೆ’ ಎಂಬುದಾಗಿ ಮ್ಯಾನ್ಮಾರ್‌ನ ಧಾರ್ಮಿಕ ಸಚಿವ ತುರ ಆಂಗ್ ಕೊ ವೀಡಿಯೊ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.

ಈ ವೀಡಿಯೊವನ್ನು ಸುದ್ದಿ ವೆಬ್‌ಸೈಟ್ ‘ನ್ಯೂಸ್‌ವಾಚ್’ ಪ್ರಸಾರ ಮಾಡಿದೆ.

‘‘ಅವರ ಸಚಿವರ ಪ್ರಚೋದನಕಾರಿ ಹೇಳಿಕೆಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಅದು ಮುಸ್ಲಿಮ್ ಭಾವನೆಗಳಿಗೂ ಘಾಸಿ ಮಾಡಿದೆ’’ ಎಂದು ಬಾಂಗ್ಲಾದೇಶ ವಿದೇಶ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ‘ರಾಯ್ಟರ್ಸ್’ಗೆ ಹೇಳಿದರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ 7.30 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ಒಳಗೆ ಬಾಕ್ಸ್

ಪೌರತ್ವ ಕೊಟ್ಟರೆ ಓಡಿ ಬರುತ್ತಾರೆ

‘ಮ್ಯಾನ್ಮಾರ್‌ನತ್ತ ಸಾಗುವಂತೆ’ ಎಂಬ ಹೇಳಿಕೆಯನ್ನು ಖಂಡಿಸಿದ ಅವರು, ‘‘ಭಯೋತ್ಪಾದನೆಗೆ ನಾವು ಶೂನ್ಯ ಸಹನೆ ಹೊಂದಿದ್ದೇವೆ. ಮೂಲಭೂತವಾದವನ್ನು ನಾವು ಯಾವತ್ತೂ ಬೆಂಬಲಿಸಿಲ್ಲ’’ ಎಂದು ಅವರು ನುಡಿದರು.

‘‘ನೀವು ಅವರಿಗೆ ಪೌರತ್ವ ಕೊಟ್ಟರೆ ಹಾಗೂ ಅವರ ಆಸ್ತಿ ವಾಪಸ್ ಕೊಟ್ಟರೆ ಅವರು ಮ್ಯಾನ್ಮಾರ್‌ಗೆ ಓಡಿ ಬರುತ್ತಾರೆ. ಅದನ್ನು ಮಾಡುವ ಬದಲು ನೀವು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದೀರಿ. ಇದು ದುರದೃಷ್ಟಕರ’’ ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News