ಕರ್ಜೆ: ಬಿಜೆಪಿ ನಾಯಕರಿಂದ ದೇವಸ್ಥಾನದ ಅರ್ಚಕರ ಬೆತ್ತಲೆಗೊಳಿಸಿ ಹಲ್ಲೆ

Update: 2018-12-06 17:55 GMT
ರಾಮಕೃಷ್ಣ - ಶ್ರೀಕಾಂತ

ಉಡುಪಿ, ಡಿ.6: ಬ್ರಹ್ಮಾವರ ಸಮೀಪದ ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕರನ್ನು ಬಿಜೆಪಿ ಮುಖಂಡರು ಹಾಗೂ ಬಜರಂಗದಳದ ಕಾರ್ಯಕರ್ತರೆನ್ನಲಾದ ಕೆಲವರು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ಗುರುವಾರ ಅಪರಾಹ್ನದ ಸುಮಾರಿಗೆ ನಡೆದಿದೆ.

ದೇವರ ಪೂಜೆಗಾಗಿ ಮಡಿ ಬಟ್ಟೆ ತೊಟ್ಟು ಜಪದಲ್ಲಿದ್ದ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ರಾಮಕೃಷ್ಣ ಅಡಿಗ (61) ಹಾಗೂ ಅವರ ಅಣ್ಣನ ಮಗ ಶ್ರೀಕಾಂತ್ ಅಡಿಗ (32) ಹಲ್ಲೆಗೆ ಒಳಗಾದವರಾಗಿದ್ದಾರೆ. ಸದ್ಯ ಇವರಿಬ್ಬರು ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿದ್ದು ಚಿಕಿತ್ಸೆ ಪಡೆಯುತಿದ್ದಾರೆ.

ಡಿ. 3ರಿಂದ ಕರ್ಜೆಯ ದೇವಸ್ಥಾನದಲ್ಲಿ ಕಾರ್ತಿಕಾ ಮಾಸದ ದೀಪೋತ್ಸವ ನಡೆಯುತ್ತಿದ್ದು, ಗುರುವಾರವೂ ಪೂಜೆಗೆ ಸಿದ್ಧತೆ ನಡೆದಿತ್ತು. ಈ ವೇಳೆ ಕರ್ಜೆ ಗ್ರಾಪಂನ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ತಡಾಲ್, ಸುಗ್ಗಿ ಸುಧಾಕರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಕಂಗಿಬೆಟ್ಟು, ನವೀನ್ ಪುತ್ರನ್, ಸದಾನಂದ ಸಂತೆಕಟ್ಟೆ ಸಹಿತ 20ಕ್ಕೂ ಅಧಿಕ ಮಂದಿಯ ತಂಡ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಗೂಂಡಾ ವರ್ತನೆ ತೋರಿಸಿದೆ ಎನ್ನಲಾಗಿದೆ.

ಪೂಜೆಯ ತಯಾರಿಗಾಗಿ ಮಡಿ ಬಟ್ಟೆ ತೊಟ್ಟಿದ್ದ ಅನುವಂಶಿಕ ಅರ್ಚಕ ಶ್ರೀಕಾಂತ್ ಹಾಗೂ ಅನುವಂಶಿಕ ಮೊಕ್ತೇಸರ ರಾಮಕೃಷ್ಣ ಅಡಿಗ ಅವರ ಬಟ್ಟೆ ಎಳೆದು ತಂಡ ಬೆತ್ತಲೆಗೊಳಿಸಿದೆ ಎನ್ನಲಾಗಿದೆ. ಅಲ್ಲದೇ ತಂಡ ಮರದ ರೀಪ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷರಿಂದಲೇ ಹಲ್ಲೆ

ಕರ್ಜೆಯ ಈ ದೇವಸ್ಥಾನವನ್ನು 25 ವರ್ಷಗಳ ಹಿಂದೊಮ್ಮೆ ಜೀರ್ಣೋದ್ಧಾರ ಮಾಡಲಾಗಿತ್ತು. ಆಗಿನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ದೇವಳದ ಸಂಪೂರ್ಣ ಆಡಳಿತವನ್ನು ಅನುವಂಶಿಕ ಅರ್ಚಕರಿಗೆ ಬಿಟ್ಟುಕೊಟ್ಟಿದ್ದರು. ಇದೀಗ 2018 ಮಾರ್ಚ್‌ನಲ್ಲಿ ಜೀರ್ಣೋದ್ಧಾರ ಮಾಡಿದ್ದ ಅಧ್ಯಕ್ಷ ದೇವಳವನ್ನು ತನ್ನ ಸುಪರ್ದಿಗೆ ಪಡೆಯುವ ಹುನ್ನಾರ ರೂಪಿಸಿದ್ದ. ಇದಕ್ಕಾಗಿ ಪದೇ ಪದೇ ಕಿರುಕುಳವೂ ನೀಡುತ್ತಿದ್ದ. ಇದೇ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರ ತಂಡವೇ ಇಂದು ಇಬ್ಬರ ಮೇಲೆ ಹಲ್ಲೆ ನಡೆಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ದೇವಸ್ಥಾನದ ಅಕ್ರಮ ಹಸ್ತಕ್ಷೇಪ ವಿಚಾರವಾಗಿ ಸಗ್ರಿ ವೇದವ್ಯಾಸ ತಂತ್ರಿ ಅವರ ಮನೆಯಲ್ಲಿ ಶಾಸಕ ಕೆ. ರಘುಪತಿ ಭಟ್ ಸಮ್ಮುಖದಲ್ಲಿ ರಾಜಿ ಸಂಧಾನವೂ ನಡೆದಿತ್ತೆನ್ನಲಾಗಿದೆ. ಈ ಸಂದರ್ಭ ಆರೋಪಿ ಸುಗ್ಗಿ ಸುಧಾಕರ್ ಹಾಗೂ ಸುರೇಶ್ ಶೆಟ್ಟಿ ತಡಾಲ್ ಕೈ ಕಾಲು ತುಂಡರಿಸುವುದಾಗಿ ಜೀವ ಬೆದರಿಕೆ ಒಡ್ಡಿದ್ದರು. ಈ ಸಮಸ್ಯೆಯನ್ನು ಶಾಸಕರು ಸರಿಯಾಗಿ ನಿಭಾಯಿಸಿದ್ದರೆ ಇಷ್ಟೆಲ್ಲ ಸಮಸ್ಯೆ ಆಗುತ್ತಿರಲಿಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ಹಲ್ಲೆಗೆ ಮುಂದಾಗುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅಡಿಗ ತನ್ನನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದ್ದಾರೆ.

ದೇವಳದ ವಿಚಾರಕ್ಕೆ ಸಂಬಂಧಿಸಿ ರಾಜಿ ಸಂಧಾನಕ್ಕಾಗಿ ಸಗ್ರಿ ವೇದವ್ಯಾಸ ತಂತ್ರಿ ಅವರ ಮನೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆಗೆ ರಾಮಕೃಷ್ಣ ಅಡಿಗ ಸಹೋದರ ಬಂದಿದ್ದರು. ಅಂದಿನ ಸಭೆಗೆ ಇವರು ಬಂದಿರಲಿಲ್ಲ. ಸಭೆಯಲ್ಲಿ ರಾಮಕೃಷ್ಣರ ತಾಯಿ ಪಾರ್ವತಿ ಅಮ್ಮನವರೇ ದೇವಳದ ಅನುವಂಶಿಕ ಮೊಕ್ತೇಸರತನ ನನಗೆ ಬೇಡವೆಂದು ನನ್ನ ಸಮ್ಮುಖದಲ್ಲೇ ಬಿಟ್ಟುಕೊಟ್ಟಿದ್ದಾರೆ. ಇದೀಗ ದೇವಳ ಅಭಿವೃದ್ಧಿಯಾಗಿದ್ದು, ಹಣ ಮಾಡುವ ಸ್ವಾರ್ಥದಿಂದ ಅಡಿಗರು ಈ ರೀತಿಯ ನಾಟಕ ಮಾಡುತಿದ್ದು, ನನ್ನ ಮೇಲೆ ವೃಥಾರೋಪ ಮಾಡುವುದು ಸರಿಯಲ್ಲ.
- ಕೆ. ರಘುಪತಿ ಭಟ್, ಶಾಸಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News