ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಿ: ಅದಮಾರುಶ್ರೀ

Update: 2018-12-07 14:13 GMT

ಉಡುಪಿ, ಡಿ.7: ನಮ್ಮ ಹಿರಿಯರು, ಋಷಿ ಮುನಿಗಳು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ, ಎಷ್ಟೊಂದು ವಿಷಯಗಳ ಕುರಿತು ಸ್ಪಷ್ಟವಾದ ಮಾಹಿತಿ, ಫಲಿತಾಂಶಗಳನ್ನು ತಿಳಿಸಿಹೇಳಿದ್ದಾರೆ. ಇವುಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ, ಇನ್ನಷ್ಟು ಮಾಹಿತಿಗಳನ್ನು ಹೊರಚೆಲ್ಲಬೇಕು ಎಂದು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬೆಂಗಳೂರಿನ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಸಹಯೋಗ ದೊಂದಿಗೆ ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ‘ವೈಜ್ಞಾನಿಕ ಸಂಶೋಧನೆಯಲ್ಲಿ ಇತ್ತೀಚಿನ ಬೆಳವಣಿಗೆಗಳು: ಒಂದು ನೋಟ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿಜ್ಞಾನದಲ್ಲಿ ಒಳ್ಳೆಯ ಸಂಶೋಧಕರು ಇಲ್ಲಿಂದ ಬರಬೇಕು ಎಂಬ ಸದುದ್ದೇಶದಿಂದ ನಮ್ಮ ಗುರುಗಳು ಬೆಂಗಳೂರಿನಲ್ಲಿ ಸಂಶೋಧನೆಗೇ ಮೀಸಲಾದ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ಪಿಪಿಐಎಸ್‌ಆರ್) ಯನ್ನು ಸ್ಥಾಪಿಸಿದ್ದರು. ನಮ್ಮ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಿಪಿಐಎಸ್‌ಆರ್‌ನ ನಿರ್ದೇಶಕ ಡಾ.ಎ.ಪಿ.ಹಲಗೇರಿ, ಕಳೆದ ಏಳೆಂಟು ವರ್ಷಗಳಲ್ಲಿ ನಮ್ಮ ಸಂಸ್ಥೆ ಸಂಶೋಧನೆಗೆ ಒತ್ತು ಕೊಟ್ಟು ಕೆಲಸ ಮಾಡುವುದರ ಜೊತೆಜೊತೆಗೆ ಬೆಂಗಳೂರು ಆಸುಪಾಸಿನ ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಹೆಚ್ಚಿಸಲು ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದೇವೆ ಎಂದು ವಿವರಿಸಿದರು.

ವಿದ್ಯಾರ್ಥಿಗಳಲ್ಲಿ ಪ್ರೌಢ ಶಾಲಾ ಮಟ್ಟದಲ್ಲೇ ವಿಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸಬೇಕು. ಅವರು ವಿಜ್ಞಾನದಲ್ಲಿ, ವಿವಿಧ ವಿಷಯಗಳಲ್ಲಿ ಕುತೂಹಲ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ಕುತೂಹಲ ಅವರಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಮೂಡಿಸಬಲ್ಲದು ಎಂದರು.

ಬಹಳಷ್ಟು ವಿಷಯಗಳಲ್ಲಿ ಈಗ ವಿಶೇಷವಾದ ಸಂಶೋಧನೆಗಳು ನಡೆಯುತ್ತಿವೆ. ಮೆಟಲ್, ನೀರನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದ್ದು, ಅದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಿದರೆ, ಅನೇಕ ಸಮಸ್ಯೆಗಳಿಗೆ ಅದು ಪರಿಹಾರ ಸೂಚಿಸಬಹುದು. ಅದೇ ರೀತಿ ಪಾಲಿಮರ್ ಕುರಿತ ಸಂಶೋಧನೆ, ನೀರು, ಇಂಧನ ಹಾಗೂ ಪರಿಸರಕ್ಕೆ ಅವುಗಳ ಅಳವಡಿಕೆ ಕುರಿತು ಇನ್ನಷ್ಟು ಮಾಹಿತಿ ನೀಡಬಹುದು ಎಂದರು.

ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಜಗದೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಸಿಎಂಸಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಹಾಗೂ ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಎಂ. ಉಪಸ್ಥಿತರಿದ್ದರು. ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಡಾ.ಎ.ಪಿ.ಭಟ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News