ಸುಜ್ಲಾನ್ ಕಾರ್ಮಿಕರ ವರ್ಗಾವಣೆ ವಿವಾದ: ಡಿ.17ಕ್ಕೆ ಮತ್ತೆ ಸಭೆ

Update: 2018-12-07 15:02 GMT

ಪಡುಬಿದ್ರಿ, ಡಿ. 7: ಸುಜ್ಲಾನ್ ಪವನ ವಿದ್ಯುತ್ ಯಂತ್ರ ತಯಾರಿಕಾ ಘಟಕದ 326 ಕಾರ್ಮಿಕರ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರೆದ ಸಭೆಯು ಯಾವುದೇ ಪರಿಹಾರ ಕಂಡುಕೊಳ್ಳಲು ಆಗದೆ ಸಭೆಯನ್ನು ಡಿ. 17ಕ್ಕೆ ಮುಂದೂಡಲಾಯಿತು. 

ಅ. 9ರಂದು 326 ಕಾರ್ಮಿಕರನ್ನು ಪೂರ್ವಮಾಹಿತಿ ನೀಡದೆ ಜೈಸಲ್ಮೇರ್ ಘಟಕಕ್ಕೆ ವರ್ಗಾವಣೆ ಮಾಡಿತ್ತು. ಆ ಬಳಿಕ ಸುಜ್ಲಾನ್ ಕಾರ್ಮಿಕ ಸಂಘವು ಮಹಾಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ ಮುಂದಿನ ಹೋರಾಟ ನಡೆಸಲು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ಸಮಸ್ಯೆ ಪರಿಹರಿಸಿಕೊಳ್ಳು ಮನವಿ ಮಾಡಲಾಗಿತ್ತು. 

ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕಂಪನಿಯ ಆಡಳಿತ ಮಂಡಳಿ, ಇಂಟಕ್ ಮುಖಂಡರು ಮತ್ತು ಸುಜ್ಲಾನ್ ಕಾರ್ಮಿಕ ಮುಖಂಡರ ಸಭೆ ಕರೆದು ಸಮಾಲೋಚನೆ ನಡೆಸಿತ್ತು.

ಇಂಟಕ್ ಮುಖಂಡರು ಈ ಬಗ್ಗೆ ಸಭೆಯಲ್ಲಿ ಮಾತನಾಡಿ, 326 ಕಾರ್ಮಿಕರು ರಾಜಸ್ಥಾನದ ಜೈಸಲ್ಮೇರ್‍ಗೆ ಹೋಗಿ ದುಡಿಯಲು ತಯಾರಿದ್ದು, ಕಾರ್ಮಿಕರಿಗೆ ಶೇ.40 ವೇತನ ಹೆಚ್ಚಳ, ವಸತಿ ಸೌಕರ್ಯ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಜೈಸಲ್ಮೇರ್ ಇರುವ ಕಾರಣ ಭದ್ರತೆ ಒದಗಿಸಿದಲ್ಲಿ ತಕ್ಷಣ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದರು. ಅಲ್ಲದೆ ಕಂಪನಿಯು ಕಡಿಮೆ ದರದಲ್ಲಿ ಸರ್ಕಾರದಿಂದ ಪಡೆದ ಜಾಗವನ್ನು ಪರಾಭಾರೆ ಮಾಡಲಿದ್ದಾರೆಂದು ಆರೋಪಿಸಿದರು. ಪಡುಬಿದ್ರಿ ಸುಜ್ಲಾನ್ ಜಾಗದಲ್ಲಿ ಬೇರೆ ಘಟಕ ಸ್ಥಾಪನೆಯಾದಲ್ಲಿ ಈ 326 ಕಾರ್ಮಿಕರಿಗೆ ನೌಕರಿ ನೀಡಲು ಒತ್ತಾಯಿಸಲಾಯಿತು. 

ಸಭೆಯಲ್ಲಿ ಹಾಜರಿದ್ದ ಸುಜ್ಲಾನ್ ಕಂಪನಿಯ ನಿರ್ದೇಶಕ ವಿಜಯ್ ಅಸ್ನಾನಿ ಮತ್ತು ಎಚ್‍ಆರ್ ಹೆಡ್ ಅಮರ್ ಸಿಂಗ್, ಕಂಪನಿ ನಷ್ಟದಲ್ಲಿ ಮುಂದುವರಿಯುವ ಕಾರಣವೊಡ್ಡಿ, ಇಂಟಕ್‍ನ ಯಾವುದೇ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ. ಬಾಕಿ ಇರುವ ವೇತನ ಪಾವತಿ ಬಗ್ಗೆಯೂ ಯಾವುದೇ ಭರವಸೆ ನೀಡಲಿಲ್ಲ. ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯವರು ಕಂಪನಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಡಿ. 17ರಂದು ಇನ್ನೊಂದು ಸಭೆ: ಎಸ್‍ಇಝಡ್ ಮುಖ್ಯಸ್ಥರ ಸಮ್ಮುಖ ಡಿಸೆಂಂಬರ್ 17ರಂದು ಮತ್ತೊಮ್ಮೆ ಸಭೆ ಕರೆದು ಸಮಸ್ಯೆ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು. ಇದೇ ವೇಳೆ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಸುಜ್ಲಾನ್ ಘಟಕದ ಎದುರು ಪ್ರತಿಭಟನೆ ನಡೆಸಲು ಅನುಮತಿಯನ್ನೂ ಕೋರಲಾಯಿತು.

ಜಿಲ್ಲಾ ಕಾರ್ಮಿಕ ಇಲಾಖಾಧಿಕಾರಿ ಮಲ್ಲಿಕಾಜುನ, ಸುಜ್ಲಾನ್ ಕಂಪನಿಯ ಪ್ಲಾಂಟ್ ಹೆಡ್ ದಕ್ಷಿಣಾಮೂರ್ತಿ, ಎಸ್‍ಇಝಡ್ ಅಧಿಕಾರಿ ಸತ್ಯಜಿತ್, ಇಂಟಕ್ ರಾಜ್ಯ ಸಮಿತಿಯ ಕಾರ್ಯದರ್ಶಿ ಸುರೇಶ್ ಪಿಕೆ, ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ದಕ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ, ಸುಜ್ಲಾನ್ ಕಾರ್ಮಿಕ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News