ಆಡಿಯೋ ಟೇಪ್ ಪರಿಶೀಲನೆ: ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್

Update: 2018-12-07 15:04 GMT

ಮಂಗಳೂರು, ಡಿ.7: ಕುಖ್ಯಾತ ಕ್ರಿಮಿನಲ್ ಜತೆ ನಗರ ಅಪರಾಧ ಪತ್ತೆದಳ ಸಿಬ್ಬಂದಿ (ಸಿಸಿಬಿ) ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತನಿಖೆ ನಡೆಸುತ್ತಿದ್ದು, ತನಿಖೆ ಪ್ರಗತಿಯಲ್ಲಿದ್ದು ಆಡಿಯೋ ಟೇಪ್ ಪರಿಶೀಲನೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.

ನಗರದ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತನಿಖಾಧಿಕಾರಿ ಸಿಸಿಬಿ ಸಿಬ್ಬಂದಿಗೆ ಈಗಾಗಲೇ ಮೆಮೋ ಜಾರಿ ಮಾಡಿ, ಮಾಹಿತಿ ಕೇಳಿದ್ದಾರೆ. ಆರೋಪಿಯನ್ನು ಈ ಹಿಂದೆ ಸಿಸಿಬಿಯವರು ಒಂದು ಪ್ರಕರಣದಲ್ಲಿ ಹಾಗೂ ಗ್ರಾಮಾಂತರ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಈ ಆಡಿಯೋ ಎಲ್ಲಿಂದ ಸೋರಿಕೆಯಾಗಿದೆ? ಈ ಆಡಿಯೋ ಯಾವ ಸನ್ನಿವೇಶದಲ್ಲಿ ಮಾತನಾಡಿದ್ದು ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.

ಬಗೆದಷ್ಟೂ ತೆರೆದುಕೊಳ್ಳುತ್ತಿರುವ ಬೆಟ್ಟಿಂಗ್ ದಂಧೆ: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಪರಿಸರದಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಆಟವಾಡುತ್ತಿದ್ದ ಇಬ್ಬರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿ, 2,06,000 ನಗದು ಸಹಿತ 2,18,900ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಕಿರಣ್ ಮೊಂತೆರೋ ಮತ್ತು ಕಿಶೋರ್ ಡಿಸೋಜಾ ವಿಚಾರಣೆ ವೇಳೆ ಬೆಟ್ಟಿಂಗ್ ಜಾಲದ ಮತ್ತಷ್ಟು ಮಾಹಿತಿ ಲಭಿಸಿದೆ. ಈ ಆಧಾರದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ. ಆರೋಪಿಗಳು ಮೊಬೈಲ್, ಆನ್‌ಲೈನ್ ಮುಖಾಂತರವೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News