ಮಂಗಳೂರು: ಎಪಿಡಿ ಫೌಂಡೇಷನ್‌ನಿಂದ ಅಂತಾರಾಷ್ಟ್ರೀಯ ಮಣ್ಣಿನ ದಿನ

Update: 2018-12-07 17:49 GMT

ಮಂಗಳೂರು, ಡಿ.7: ಅಂತರಾಷ್ಟ್ರೀಯ ಮಣ್ಣಿನ ದಿನಾಚರಣೆಯ ಪ್ರಯುಕ್ತ ನಗರದ ಲೇಡಿಹಿಲ್‌ನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಣ್ಣಿನ ದಿನ ಕಾರ್ಯಕ್ರಮದಲ್ಲಿ ಮಣ್ಣಿನ ಮೌಲ್ಯದ ಬಗ್ಗೆ ಹಾಗೂ ಮಣ್ಣಿನ ಮಾಲಿನ್ಯತೆಯಿಂದ ಉಂಟಾಗುವ ಹಾನಿಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು.

ಮಣ್ಣಿನ ಉಪಯುಕ್ತತೆಯ ಬಗ್ಗೆ ಮಾತನಾಡಿದ ಪರಿಸರವಾದಿ ಮಾಧವ ಉಳ್ಳಾಲ, ಜೈವಿಕ ಹಾಗೂ ಜೈವಿಕವಲ್ಲದ ಕಸವನ್ನು ವಿಂಗಡಿಸುವ ಅಗತ್ಯತೆಯ ಕುರಿತು ವಿವರಿಸಿದರು. ಮನೆಯ ಸುತ್ತಮುತ್ತಲು ಕಾಂಪೋಸ್ಟ್ ಗುಂಡಿಗಳನ್ನು ನಿರ್ಮಿಸುವುದರಿಂದ ಅಲ್ಲಿ ಜೈವಿಕ ಕಸವನ್ನು ಹಾಕಬಹುದು ಎಂದು ತಿಳಿಸಿದರು. ಅಲ್ಲದೆ, ಮಣ್ಣಿನ ಸಂರಕ್ಷಣೆಯಿಂದ ನಗರಕ್ಕೆ ಹಲವಾರು ಲಾಭಗಳಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಗಿಡಗಳನ್ನು ನೆಡುವುದರ ಜೊತೆಗೆ ಮಣ್ಣಿನ ಮೇಲ್ಪದರವನ್ನು ಕಾಪಾಡುವುದು ಸಹ ಬಹಳ ಅಗತ್ಯವಾಗಿದೆ. ಇದರಿಂದ ಸ್ವಚ್ಛ ಹಸಿರು ಪರಿಸರ ನಿರ್ಮಿಸಲು ನಮಗೆ ಸಾಧ್ಯ. ಈ ಪೀಳಿಗೆಯ ಮಕ್ಕಳು ಇದನ್ನು ತಮ್ಮ ಜವಾಬ್ದಾರಿಯಾಗಿ ತೆಗೆದುಕೊಂಡು ಅದಕ್ಕಾಗಿ ಶ್ರಮಿಸಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆಯ ಕಾರ್ಯ ಯಶಸ್ವಿಯಾಗಲು ಸಾಧ್ಯ ಎಂದರು.

ಗಿಡನೆಟ್ಟರೆ ಕರ್ತವ್ಯ ಮುಗಿಯುವುದಿಲ್ಲ, ಅದನ್ನು ಉಳಿಸಿ ಬೆಳೆಸುವುದು ಸಹ ಬಹಳ ಮುಖ್ಯವಾದದ್ದು. ಆಗ ಮಣ್ಣಿನ ಮೇಲ್ಪದರ ಸುರಕ್ಷಿತವಾಗಿ ಉಳಿಯಲು ಸಾಧ್ಯ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಲೇಡಿಹಿಲ್ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಎಂ. ಸಿಲ್ವಿಯಾ ಎ.ಸಿ. ಮಾತನಾಡಿ, ಪ್ರತೀ ವಿದ್ಯಾರ್ಥಿಯು ತನ್ನ ಮನೆಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಕರೆ ನೀಡಿದರು. ವರ್ಷದ ಕೊನೆಗೆ ಯಾರು ಅತೀ ಹೆಚ್ಚು ಗಿಡ ನೆಡುತ್ತಾರೋ ಆ ವಿದ್ಯಾರ್ಥಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದರು.
ಎಪಿಡಿ ಫೌಂಡೇಷನ್‌ನ ಸದಸ್ಯರು ಮಣ್ಣಿನ ಸಂರಕ್ಷಣೆಗೆ ಸಂಬಂಧಿತ ಕೆಲ ವೀಡಿಯೋಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಲ್ಲಿ ಮರ-ಗಿಡಗಳ ಬಗ್ಗೆ ಆಸಕ್ತಿ ಹೆಚ್ಚಿಸುವ ಸಲುವಾಗಿ ಸಾಮಾನ್ಯ ಹಣ್ಣು ಮತ್ತು ಹೂವುಗಳಿಂದ ಲಭಿಸುವ ಆರೋಗ್ಯದ ಲಾಭಗಳನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಪಿಡಿ ಫೌಂಡೇಷನ್‌ನ ಪಿ.ಆರ್. ಕಮ್ಯೂನಿಕೇಶನ್ ಮುಖ್ಯಸ್ಥೆ ವಾಣಿಶ್ರೀ, ಆಪರೇಶನ್ ಮುಖ್ಯಸ್ಥ ಕಾರ್ಲ್ ಡಿಕುನ್ಹಾ ಮತ್ತು ಕಾರ್ಯಕ್ರಮ ಸಂಯೋಜಕ ಧನುಷ್ ದೇಸಾಯಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News