ಮಂಗಳೂರು: 'ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ' ವಿರುದ್ಧ ಹರತಾಳ

Update: 2018-12-07 16:39 GMT

ಮಂಗಳೂರು, ಡಿ. 7: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಜನವರಿ 8 ಮತ್ತು 9ರಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿಗಳಿಂದ ಹರತಾಳ ನಡೆಸಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಮುಖಂಡ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಗುಣ ಶೇಖರ ತಿಳಿಸಿದ್ದಾರೆ.

ದೇಶಾದ್ಯಂತ ಎರಡು ದಿನಗಳ ಕಾಲ ನಡೆಯಲಿರುವ ಹರತಾಳದ ಪೂರ್ವಭಾವಿಯಾಗಿ ನಗರದ ಬಿಜೈ ಕೆಬಿಇಎ ಸಭಾಂಗಣದಲ್ಲಿಂದು ಹಮ್ಮಿಕೊಂಡ ದ.ಕ ಜಿಲ್ಲಾ ಮಟ್ಟದ ಕಾರ್ಮಿಕ ಸಂಘಟನೆಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಮಾಡಲಾದ ಕಾರ್ಮಿಕ ಹಿತರಕ್ಷಣೆಯ ಕಾನೂನುಗಳನ್ನು ಜಾರಿಯಾಗಲು ಕೆಲವು ಮಾಲಕರ ಜೊತೆ ಸರಕಾರವೂ ಅಡ್ಡಿಯಾಗಿದೆ.ಈ ಕಾನೂನುಗಳನ್ನು ತಿದ್ದು ಪಡಿ ಮಾಡುವ ಮೂಲಕ ಸರಕಾರ ಮಾಲಕರ ಪರ ನಿಂತಿದೆ ಎಂದು ಗುಣ ಶೇಖರ ತಿಳಿಸಿದ್ದಾರೆ.ಪರಿಣಾಮವಾಗಿ ದೇಶದಲ್ಲಿ ಸಣ್ಣ ಕೈಗಾರಿಕೆಗಳು ನಾಶವಾಗುತ್ತಿದೆ. ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಕಾರ್ಮಿಕರ ಕನಿಷ್ಠ ಕೂಲಿಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಿತಾಸಕ್ತಿಯ ರಕ್ಷಣೆ ಮತ್ತು ಕಾರ್ಮಿಕರ ಉಳಿವಿಗಾಗಿ ಕಾಪೋರೇಟ್ ಶಕ್ತಿಗಳ ಪರವಾಗಿರುವ ಸರಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಸರಕಾರವನ್ನು ಬದಲಾಯಿಸುವ ಶಕ್ತಿ ಕಾರ್ಮಿಕ ರಿಗಿದೆ ಎಂದು ಎಚ್ಚರಿಸಿದರು. ಎರಡು ದಿನಗಳ ಹರತಾಳವನ್ನು ಯಶಸ್ವಿಗೊಳಿಸಲು ಎಲ್ಲಾ ಕಾರ್ಮಿಕ ಸಂಘಟನೆಗಳು ಒಂದಾಗ ಬೇಕಾಗಿದೆ ಎಂದು ಗುಣ ಶೇಖರ ತಿಳಿಸಿದ್ದಾರೆ.

ಮೋದಿ ಆಡಳಿತಕ್ಕೆ ಬಂದ ಬಳಿಕ 91ಲಕ್ಷ ಕೈಗಾರಿಕೆಗಳು ಮುಚ್ಚಿವೆ

ದೇಶಕ್ಕೆ ಅಚ್ಛೇ ದಿನ ಬರುತ್ತದೆ ಎಂದು ಹೇಳುತ್ತಾ ಅಧಿಕಾರಕ್ಕೆ ಏರಿದ ಬಿಜೆಪಿ ಸರಕಾರದ ಮುಖಂಡ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ 91ಲಕ್ಷ ಕೈಗಾರಿಗಳು ಸ್ಥಗಿತಗೊಂಡವು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ತಿಳಿಸಿದ್ದಾರೆ.ದೇಶವನ್ನು ಪ್ರವೇಶಿಸಿದ ನವ ಉದಾರೀಕರಣ ನೀತಿಯ ಪರಿಣಾಮವಾಗಿ ಉಂಟಾದ ರೈತರ ಆತ್ಮ ಹತ್ಯೆಗಳು ಇನ್ನೂ ಮುಂದುವರಿದಿದೆ. ಕರ್ನಾಟಕದಲ್ಲೂ ನೂತನ ಸರಕಾರ ಬಂದು ರೈತರ ಸಾಲ ಮನ್ನಾ ಘೋಷಣೆಯಾದ ಬಳಿಕವೂ 130 ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿರುವ 140 ಕೋಟಿ ಜನರಲ್ಲಿ ಶೇ 90ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ.ಶೇ6ರಷ್ಟಿರುವ ಸಂಘಟಿತ ಕಾರ್ಮಿಕರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ದೇಶದ ಸಂಪತ್ತು ಕಾರ್ಮಿಕರ ಹಿತಸಕ್ತಿ ಉಳಿಯ ಬೇಕಾದರೆ ಸರಕಾರ ತನ್ನ ನೀತಿಯನ್ನು ಬದಲಾಯಿಸಬೇಕು ಈ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ದೇಶಾದ್ಯಂತ ಈ ರೀತಿಯ ಐತಿಹಾಸಿಕ ಚಳವಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ವ ಸಂತ ಆಚಾರಿ ತಿಳಿಸಿದ್ದಾರೆ.

ಸಾರ್ವಜನಿಕರ ಹಿತಾಸಕ್ತಿಯಿಂದ ಖಾಸಗಿ ಬ್ಯಾಂಕ್‌ಗಳನ್ನು ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ರಾಷ್ಟ್ರೀಕರಣ ಗೊಳಿಸಲಾಗಿತ್ತು.ಈಗಿನ ಸರಕಾರ ಇವುಗಳನ್ನು ಪರಿಗಣಿಸದೆ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಕಾರ್ಮಿಕರ ಕನಿಷ್ಠ ಕೂಲಿಯ ಬೇಡಿಕೆಯನ್ನು ಪರಿಗಣಿಸಲಾಗುತ್ತಿಲ್ಲ. ಕಾರ್ಮಿಕರ 12 ಬೇಡಿಕೆಗಳು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್‌ಎಂಎಸ್ ಮುಖಂಡ ಮುಹಮ್ಮದ್ ರಫಿ ತಿಳಿಸಿದ್ದಾರೆ.

ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಿರಿ ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಿ ಗ್ರಾಮಾಂತರ ದ ಸಾಕಷ್ಟು ಮಹಿಳೆಯರು ಬ್ಯಾಂಕ್‌ನಲ್ಲಿ ಖಾತೆ ತೆರೆದು ಕಾದು ಕಾದು ಸುಸ್ತಾಗಿದ್ದಾರೆ. ಹಣ ಬರಲಿಲ್ಲ. ಈಗ ಅವರಿಗೆ ಗೊತ್ತಾಗಿದೆ ಮೋದಿ ಸರಕಾರದ ಈ ರೀತಿಯ ಸುಳ್ಳು ಭರವಸೆಯಿಂದ ಹೆಚ್ಚು ತೊಂದರೆಗೊಳಗಾದವರು ಮಹಿಳೆಯರು ಕಾರ್ಮಿಕರು ಎಂದು ಇಂಟಕ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿ ತಿಳಿಸಿದ್ದಾರೆ.

ಬ್ಯಾಂಕ್ ವಿಲೀನದ ಬಳಿಕ ಎಸ್‌ಬಿಐಯ 70ಮ ಶಾಖೆಗಳನ್ನು ಮುಚ್ಚಿದೆ.ಓಎನ್‌ಜಿಸಿಯಲ್ಲೂ ಸರಕಾರ ಹಸ್ತಕ್ಷೇ ಮಾಡುತ್ತಿದೆ ತೈಲ ಕಂಪೆನಿಗಳ ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ದೇಶದಲ್ಲಿ 3000 ಕೋಟಿ ರೂ ಪ್ರತಿಮೆ ನಿರ್ಮಿಸಲಾಗಿದೆ ಎಂದು ಬ್ಯಾಂಕ್ ನೌಕರರ ಸಂಘದ ಮುಖಂಡ ಬಿ.ಎಂ.ಮಾಧವ ತಿಳಿಸಿದ್ದಾರೆ.

ದೇಶದಲ್ಲಿ ನೋಟ್ ಬಂಧಿಯಾದ ಸಂದರ್ಭದಲ್ಲಿ ಅಮಿತ್ ಶಾನಿರ್ದೇಶಕಾರಗಿರುವ ಸಹಕಾರಿ ಬ್ಯಾಂಕ್ ಒಂದರಿಂದ 765 ಕೋಟಿ ರೂ ಜಮೆಯಾಯಿತು. ಕಪ್ಪು ಹಣ ಮಾತ್ರ ಪತ್ತೆ ಸಾಧ್ಯವಾಗಲಿಲ್ಲ. ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ವಸೂಲಾಗದಿರುವ ಸಾಲಗಳ ಪೈಕಿ ಹತ್ತೂವರೆ ಲಕ್ಷ ಕೋಟಿ ರೂ ಹಣದಲ್ಲಿ 86 ಶೇಕಡಾ ಸಾಲ ಬೃಹತ್ ಉದ್ದಿಮೆಗಳಿಗೆ ಸೇರಿದ್ದಾಗಿದೆ. ಈ ಸಾಲವನ್ನು ಸರಕಾರ ಮನ್ನಾ ಮಾಡಲು ಹೊರಟಿದೆ. ದಕ್ಷಿಣ ಕನ್ನಡದ ಬಂಟ ಸಮುದಾಯದ ಮೂಲಕ ಸ್ಥಾಪನೆಯಾಗಿ ಲಾಭದಲ್ಲಿದ್ದ ಪ್ರತಿಷ್ಠಿತ ಬ್ಯಾಂಕ್ ವಿಜಯ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್‌ಗಳ ಜೊತೆ ಸೇರಿಸಲಾಗಿದೆ ಈ ರೀತಿ ಖಾಸಗೀಕರಣ, ಬಂಡವಾಳ ಶಾಹಿಗಳ ಪರವಾಗಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಬಿ.ಎಂ.ಮಾದವ ತಿಳಿಸಿದ್ದಾರೆ.

ಸಮಾರಂಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.ಎಚ್‌ಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ,ಎಲ್‌ಐಸಿ ಕಾರ್ಮಿಕ ಸಂಘಟನೆಯ ಮುಖಂಡರದ ರಘವೇಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು. ಎಚ್.ವಿ.ರಾವ್ ಸ್ವಾಗತಿಸಿ, ಯೋಗೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News