ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಲಕ್ಷಾಂತರ ರೂ. ವಂಚನೆ: ದೂರು

Update: 2018-12-07 17:27 GMT

ಮಂಗಳೂರು, ಡಿ.7: ನಕಲಿ ದಾಖಲಾತಿಗಳನ್ನು ಸಿಂಡಿಕೇಟ್ ಬ್ಯಾಂಕಿಗೆ ಸಲ್ಲಿಸಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ನಗರದ ಎಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಟ್ಟಾರ ಚೌಕಿಯ ಶ್ರೀರಾಂ ಬಿಲ್ಡಿಂಗ್‌ನಲ್ಲಿರುವ ಎಸ್.ವಿ. ಟೆಕ್ನಾಲಜೀಸ್ ಸಂಸ್ಥೆಯ ಪಾಲುದಾರರಾದ ಆದಿತ್ಯ ಶೆಣೈ ಮತ್ತು ಸಂದೀಪ್ ಶೆಣೈ ಅವರು ಈ ಪ್ರಕರಣದ ಆರೋಪಿಗಳು ಎಂಬುದಾಗಿ ಹೆಸರಿಸಲಾಗಿದೆ. ಇವರು ಎಸಗಿದ್ದಾರೆ ಎನ್ನಲಾದ ಮೋಸದ ಬಗ್ಗೆ ಸಿಂಡಿಕೇಟ್ ಬ್ಯಾಂಕ್‌ನ ಕದ್ರಿ ಶಾಖೆಯ ಮ್ಯಾನೇಜರ್ ರಂಜನ್ ಕೇಳ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಗಳು ಎಸ್.ವಿ. ಟೆಕ್ನಾಲಜೀಸ್ ರ್ಮ್ ಸ್ಥಾಪಿಸಿ ನಡೆಸುವುದಕ್ಕಾಗಿ ಈ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡು ಪಾರ್ಟ್‌ರ್ನ್ನರ್‌ಶಿಪ್ ಸಹಭಾಗಿತ್ವದ ಸಂಸ್ಥೆಯಾಗಿ ಮೊಬೈಲ್ ಆ್ಯಪ್, ಇ-ಪಬ್ಲಿಕಿಂಗ್, ಸ್‌ಟಾವೇರ್ ಡೆವಲಪ್‌ಮೆಂಟ್ ಇತ್ಯಾದಿ ವ್ಯವಹಾರ ನಡೆಸುತ್ತಿದ್ದು, 2015ರ ನ.4ರಂದು 40 ಲಕ್ಷ ರೂ.ಸಾಲ ಮಂಜೂರು ಮಾಡಿಸಿಕೊಂಡು ಬಳಿಕ 20 ಲಕ್ಷ ರೂ. ಒ.ಡಿ. ಸಾಲವನ್ನು, 2016 ಫೆ. 22ರಂದು ಹಾಗೂ ಹೆಚ್ಚುವರಿ 15 ಲಕ್ಷ ರೂ. ಸೇರಿದಂತೆ ಒಟ್ಟು 65 ಲಕ್ಷ ರೂ. ಅವಧಿ ಸಾಲ ಹಾಗೂ 35 ಲಕ್ಷ ರೂ. ಓ.ಡಿ. ಸಾಲ ಪಡೆದಿದ್ದು, ಸಾಲದ ಭದ್ರತೆಗಾಗಿ ಸಂಸ್ಥೆಯ ಚರ ಆಸ್ತಿ ಸ್ಟಾಕ್‌ಗಳನ್ನು ಹೈಪೋತಿಕೇಟೆಡ್ ಮಾಡಿದ್ದರು ಎಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಬೇರೆ ಸಂಸ್ಥೆಗಳ ವರ್ಕ್ ಆರ್ಡರ್ ದಾಖಲೆ, ಸಹಿಗಳನ್ನು ಪೊರ್ಜರಿ ಮಾಡಿ ಸಿಂಡಿಕೇಟ್ ಬ್ಯಾಂಕ್‌ಗೆ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಸಾಲ ಪಡೆದುಕೊಂಡು ಮೋಸ ಮಾಡಿರುತ್ತಾರೆ. ಅಲ್ಲದೆ, ಅವರು ಬೇರೆ ಸಂಸ್ಥೆಯ ವರ್ಕ್ ಆರ್ಡರ್ ನಕಲಿಯಾಗಿ ಸಲ್ಲಿಸಿರುವುದಲ್ಲದೆ ಸಿಂಡಿಕೇಟ್ ಬ್ಯಾಂಕಿಗೆ ನೀಡಿದ ಹೈಪೋತಿಕೇಟೆಡ್ ಚರ ಸೊತ್ತ್ತುಗಳನ್ನು ಬೇರೆ ಇತರ ಬ್ಯಾಂಕ್‌ಗಳಿಗೂ ನೀಡಿ ಅಲ್ಲಿಂದಲೂ ಸಾಲ ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಎಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News