ದೇಶವ್ಯಾಪಿ ಏಕರೂಪ ಶಿಕ್ಷಣದ ಆಂದೋಲನ ನಡೆಯಬೇಕಿದೆ: ಡಾ. ವೈಎಸ್‍ವಿ ದತ್ತಾ

Update: 2018-12-07 17:58 GMT

ಬಂಟ್ವಾಳ, ಡಿ. 7: ದೇಶವ್ಯಾಪಿ ಮಾತೃಭಾಷೆ ಹಾಗೂ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಬೇಕಾದರೆ, ಏಕರೂಪ ಶಿಕ್ಷಣದ ಆಂದೋಲನ ನಡೆಯಬೇಕಿದೆ ಎಂದು ಮಾಜಿ ಶಾಸಕ, ಚಿಂತಕ ಡಾ. ವೈಎಸ್‍ವಿ ದತ್ತಾ ಹೇಳಿದ್ದಾರೆ.

ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದ ಡಾ. ಎಫ್.ಎಚ್.ಒಡೆಯರ್ ವೇದಿಕೆಯಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ಎರಡುದಿನಗಳ ಬಂಟ್ವಾಳ ತಾಲೂಕು 19ನೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಏಕರೂಪ ಶಿಕ್ಷಣದಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ಪಕ್ಷಗಳಿಗೆ ಹಿರಿಮೆ, ಗರಿಮೆ ದೊರೆಯುತ್ತದೆ. ಇದಕ್ಕೆ ದೇಶದ ಎಲ್ಲ ರಾಜ್ಯಗಳ ಬೆಂಬಲ ಬೇಕಿದೆ ಎಂದರು.

ತುಳು ಕನ್ನಡದ ಹಿರಿಯಣ್ಣ:

ಕನ್ನಡಕ್ಕೆ ಹೋಲಿಕೆ ಮಾಡಿದರೆ ಮೊದಲು ಶಾಸ್ತ್ರೀಯ ಸ್ಥಾನಮಾನ ಸಿಗಬೇಕಾದ್ದು ತುಳುಭಾಷೆಗೆ. ಆದರೆ, ತುಳುಗೆ ಲಿಪಿ ಇಲ್ಲ ಎನ್ನುವ ಕಾರಣದಿಂದ ಸ್ಥಾನಮಾನ ಸಿಕ್ಕಿಲ್ಲ. ಆದರೆ, ಅನೇಕ ವರ್ಷಗಳ ಇತಿಹಾಸವುಳ್ಳ ತುಳು ಕನ್ನಡದ ಹಿರಿಯಣ್ಣ ಎಂದವರು ವಿಶ್ಲೇಷಿಸಿದರು.

ಕನ್ನಡದ ಬೆಳವಣಿಗೆಗೆ ಅನೇಕ ಶತಮಾನಗಳಿಂದ ಅನೇಕರು ದುಡಿದಿದ್ದಾರೆ ಎಂದು ವಿವರಿಸಿದ ಅವರು, ಆದರೆ, ಇಂದಿನ ಕಾಲದಲ್ಲಿ ಕನ್ನಡದ ಬೆಳವಣಿಗೆ ಅಂದುಕೊಂಡಷ್ಟು ರೀತಿಯಲ್ಲಿ ಬೆಳವಣಿಗೆ ಕಂಡಿಲ್ಲ. ಕನ್ನಡ ಸಾಹಿತ್ಯವೆಂಬುದು ಕೇವಲ ಸಮ್ಮೇಳನಗಳಿಗೆ, ಆಸಕ್ತರಿಗೆ ಮಾತ್ರ ಎನ್ನುವ ಮನೋಭಾವವಿದ್ದು, ಕನ್ನಡದ ಸಾಹಿತ್ಯಾಭಿಮಾನವನ್ನು ಹೆಚ್ಚಿಸಬೇಕು ಎಂದರು.

ಕನ್ನಡ ಶಾಲೆಗಳನ್ನು ದುರ್ಬೀನ್ ಹಾಕಿ ಹುಡುಕುವ ಸ್ಥಿತಿ ಎದುರಾಗಲಿದೆ:

ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಸಾವಿರಾರು ಕನ್ನಡದ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಈ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕನ್ನಡ ದ ಶಾಲೆಗಳನ್ನು ದುರ್ಬೀನ್ ಹಾಕಿ ಹುಡುಕುವ ಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದರಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಕನ್ನಡ ಸಾಹಿತ್ಯದ ಸೊಗಡು, ಸೊಬಗನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದ ದತ್ತಾ ಅವರು, ಇಂದಿನ ಮಕ್ಕಳಿಗೆ ಹಳೆಗನ್ನಡ, ನಡುಗನ್ನಡದ ಪರಿಚಯ ಮಾಡಿಸುವ ಹೊಸ ತಂತ್ರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಐಟಿ-ಬಿಟಿ, ಇಂಜಿನಿಯರಿಂಗ್ ಗುಂಗಿನಲ್ಲಿ ಮುಳುಗಿದವರಿಗೆ ಕನ್ನಡ ಸಾರಸ್ವತ ಲೋಕದ ಪರಿಚಯ ಮಾಡಬೇಕಾಗಿದೆ. ಇಲ್ಲದಿದ್ದರೆ, ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ನಾಲ್ಕು ಗೋಡೆಗಳ ಸಮ್ಮೇಳನ ಆದೀತು ಎಂದರು.

ಕೃತಿಗಳ ಬಿಡುಗಡೆ:

ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು "ಸಾಹಿತ್ಯಾಂಜಲಿ" ಸ್ಮರಣ ಸಂಚಿಕೆಯ ಮುಖಪುಟ ಅನಾವರಣ ಗೊಳಿಸಿದರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಪಲ್ಲವಿ ಕಾರಂತ್ ಅವರ ಮೂರನೇ ಕೃತಿಯಾದ "ರಾಗ" ಕವನ ಸಂಕಲನ ಹಾಗೂ ವಿದ್ಯಾರ್ಥಿ ಕಾರ್ತಿಕೇಯ ರವರ "ಮನದ ಕನ್ನಡಿ" ಕೃತಿಯನ್ನು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣುಭಟ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಫರಂಗಿಪೇಟೆ ಸೇವಾಂಜಲಿ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಥ ಶೆಟ್ಟಿ, ಉದ್ಯಮಿಗಳಾದ ಬಿ. ಜಗನ್ನಾಥ ಚೌಟ, ಎಫ್. ಮುಹಮ್ಮದ್ ಬಾವ, ತುಂಬೆ ಕಾಲೇಜಿನ ಸಂಚಾಲಕ ಬಸ್ತಿವಾಮನ ಶೆಣೈ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ಗಂಗಾಧರ ಆಳ್ವ, ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಡಾ. ನಾಗವೇಣಿ ಮಂಚಿ, ರವೀಂದ್ರ ಕುಕ್ಕಾಜೆ, ಗೌರವ ಕೋಶಾಧಿಕಾರಿ ಡಾ. ಗಿರೀಶ್ ಭಟ್ ಅಜೆಕ್ಕಳ, ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಗಂಗಾಧರ್ ಭಟ್ ಕೊಳಕೆ ಮತ್ತಿತರರು ಉಪಸ್ಥಿತರಿದ್ದರು.

ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ಕೆ.ಮೋಹನ್ ರಾವ್ ಪ್ರಸ್ತಾವಿಸಿದರು. ಮೂಡಬಿದಿರೆ ಆಳ್ವಾಸ್ ಕಾಳೇಜಿನ ಉಪನ್ಯಾಪಕ ಡಾ.ಯೋಗೀಶ್ ಕೈರೋಡಿ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು.

ಕಸಪಾ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ ಆಶಯ ನುಡಿಗಳನ್ನಾಡಿದರು. ಸಭಾ ಕಾರ್ಯಕ್ರಮದ ಮೊದಲು ತುಂಬೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನಾಡಗೀತೆ, ಸ್ವಾಗತ ನೃತ್ಯ ಹಾಗೂ ಆರ್ಕುಳ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. 

ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕೆ.ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ನಿರೂಪಿಸಿದರು. ಉಪನ್ಯಾಸಕರಾದ ವಿ.ಸು.ಭಟ್, ಡಿ.ಬಿ. ಅಬ್ದುಲ್ ರಹಿಮಾನ್, ಆರ್ಕುಳ ಶ್ರೀರಾಮ ಶಾಲೆಯ ಶಿಕ್ಷಕ ಕೆ.ಆರ್.ದೇವದಾಸ್ ಸಹಕರಿಸಿದರು. 
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಭಾಷೆ-ಸಂಸ್ಕೃತಿ ಎಂಬ ವಿಷಯ ಕುರಿತ ಗೋಷ್ಠಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ವಿಷಯ ಮಂಡಿಸಿದರು.

"ದೃಶ್ಯಮಾಧ್ಯಮಗಳಲ್ಲಿ ಧಾರಾವಾಹಿಗಳು" ವಿಷಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್ ಅಧ್ಯಕ್ಷತೆಯಲ್ಲಿ ಡಾ. ವಿಜಯಲಕ್ಷ್ಮೀ ಪೊಳಲಿ, ಡಾ. ವೀಣಾ ಪಾಲಚಂದ್ರ ವಿಷಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News