ಉಳಿದ ಶಾಸಕರಿಗಿಲ್ಲದ ಅನುದಾನ ಹರೀಶ್ ಪೂಂಜರಿಗೆ ಎಲ್ಲಿಂದ: ವಸಂತ ಬಂಗೇರ ಪ್ರಶ್ನೆ

Update: 2018-12-07 18:06 GMT
ವಸಂತ ಬಂಗೇರ - ಹರೀಶ್ ಪೂಂಜ

ಬೆಳ್ತಂಗಡಿ, ಡಿ.7: ಜಿಲ್ಲೆ ಯಲ್ಲಿರುವ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಯಾವೊಬ್ಬ ಶಾಸಕನಿಗೂ ಬಾರದ ಅನುದಾನ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಬಂದಿದೆ ಎಂದರೆ ಹಾಸ್ಯಾಸ್ಪದ. ದುಡ್ಡಿನ ಬಲದಿಂದ ಜನತೆಯ ದಾರಿತಪ್ಪಿಸುವ ಕೆಲಸವನ್ನು ಹರೀಶ್ ಪೂಂಜ ಮತ್ತು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

ನಾನು ಗಮನಿಸಿದ ಹಾಗೆ ಶಾಸಕ ಹರೀಶ್ ಪೂಂಜ ಮಾಡಿರುವ ಪ್ರಸ್ತಾವಕ್ಕೆ ರಾಜ್ಯ ಸರಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಲೋಕೋಪಯೋಗಿ ಇಲಾಖೆಯಿಂದ ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ಮಂಜೂರಾಗಿರುವ ರಸ್ತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಸ್ತಾಪಕ್ಕೆ ಸರಕಾರ ಬಿಡುಗಡೆ ಮಾಡಿರುವುದೇ ಹೊರತು ಪೂಂಜಾರ ಪ್ರಸ್ತಾಪಕ್ಕೆ ಅಲ್ಲ. ಆದರೆ ಎಲ್ಲವೂ ತನ್ನಿಂದ ಆಗಿದ್ದು, ಎಂಬುದಾಗಿ ಪ್ರಚಾರ ನೀಡುತ್ತಿರುವುದು ಹಾಸ್ಯಾಸ್ಪದ ಎಂದರು.

ತಾಲೂಕಿನಲ್ಲಿ ಮಂಜೂರಾಗಿರುವ ಲೋಕೋಪಯೋಗಿ, ಪ್ರವಾಸೋದ್ಯಮ, ಮೆಸ್ಕಾಂ, ಪರಿಶಿಷ್ಟ ಪಂಗಡ, ಪಂಚಾಯತ್, ಟಾಸ್ಕ್‌ಫೋರ್ಸ್, ಸಣ್ಣ ನೀರಾವರಿ, ಧಾರ್ಮಿಕ ದತ್ತಿ ಇಲಾಖೆ, ಪಶುಭಾಗ್ಯ, ಕಂದಾಯ ಇಲಾಖೆಯ ಎಲ್ಲಾ ಕಾಮಗಾರಿಗಳು ನಾನು ಶಾಸಕನಾಗಿರುವ ಅವಧಿಯಲ್ಲಿ 2018ರ ಮಾರ್ಚ್ ತಿಂಗಳಲ್ಲಿ ಮಂಜೂರಾಗಿದ್ದು, ಶಾಸಕ ಪೂಂಜ ತಾನು 200 ದಿನಗಳಲ್ಲಿ 102 ಕೋಟಿಯನ್ನು ತಾಲೂಕಿಗೆ ತಂದಿರುವೆ ಎಂದು ಪ್ರಚಾರಗಿಟ್ಟಿಸುತ್ತಿದ್ದಾರೆ. ಮೇ.15ರಂದು ಶಾಸಕನಾದ ಪೂಂಜನ ಈ ರೀತಿಯ ಹೇಳಿಕೆ ಮಗು ಹೊಟ್ಟೆಯೊಳಗಿರುವಾಗಲೇ ಹೊರಗಿನ ಕೆಲಸ ಕಾರ್ಯಗಳನ್ನು ಮಾಡಿದಂತಾಗಿದೆ ಎಂದು ವ್ಯಂಗ್ಯವಾಡಿದರು.

ಶಾಸಕ ಪೂಂಜ ಮತ್ತು ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್ ತಾನು ಪ್ರಚಾರ ಮಾಡಿರುವ ವಿಚಾರಗಳೆಲ್ಲ ಸತ್ಯಾಂಶದಿಂದ ಕೂಡಿದ್ದರೆ ಅವರೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ. ಕೇವಲ ಎಲ್ಲೋ ಕುಳಿತು ಪತ್ರಿಕಾ ಹೇಳಿಕೆ ನೀಡುವ ಬದಲು ಪತ್ರಕರ್ತರ ಜೊತೆ ನನ್ನನ್ನೂ ಸೇರಿಸಿ ಚರ್ಚೆಗೆ ವೇದಿಕೆ ಸಿದ್ಧಮಾಡಲಿ. ಜನತೆಗೆ ನಿಜ ವಿಷಯ ಯಾವುದು ಎಂಬುದು ಬಹಿರಂಗವಾಗಲಿ ಎಂದು ಸವಾಲು ಎಸೆದ ಅವರು ತಾನು ಮಂಜೂರು ಮಾಡಿ ತಂದ ಅನುದಾನಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಬೀಡಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ

ಬೀಡಿ ಕಾರ್ಮಿಕರಿಗೆ ಬೀಡಿ ಮಾಲಕರಿಂದ ನಿರಂತರ ವಂಚನೆ ಮುಂದುವರಿದಿದೆ. 2018 ರ ಎಪ್ರಿಲ್ 1ರಿಂದ ಸರಕಾರ 1000 ಬೀಡಿಗೆ ಕನಿಷ್ಠ ಕೂಲಿ ರೂ.210 ಮತ್ತು ತುಟ್ಟಿ ಭತ್ತೆ ರೂ. 10.52 ನೀಡಬೇಕು ಎಂದು ಆದೇಶ ಮಾಡಿದ್ದರೂ ಕಾರ್ಮಿಕರಿಗೆ ಇನ್ನೂ ನೀಡಿಲ್ಲ. ಕಳೆದ ಮೂರು ವರ್ಷಗಳಿಂದ ಬೀಡಿ ಮಾಲಕರು ಕಾರ್ಮಿಕರಿಗೆ ತಲಾ ರೂ.11,934 ನೀಡಬೇಕಾಗಿದ್ದು, ಸುಮಾರು 960 ಕೋಟಿ ವಂಚನೆ ಮಾಡಿರುವುದು ಖಂಡನೀಯ. ಕಾರ್ಮಿಕ ಇಲಾಖೆ ತಕ್ಷಣ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ನ್ಯಾಯಯುತ ಬೇಡಿಕೆಗೆ ಸಂಪೂರ್ಣ ಬೆಂಬಲ ಇದೆ. ಜೊತೆಗೆ ಅವರಿಗೆ ಗ್ರಾಚ್ಯುವಿಟಿಯನ್ನು ಪಾವತಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ಜಿಪಂ ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ, ಶೇಖರ ಕುಕ್ಕೇಡಿ, ತಾಪಂ ಸದಸ್ಯ ಪ್ರವೀಣ್‌ಗೌಡ, ಪಪಂ ಸದಸ್ಯರಾದ ಜಗದೀಶ್ ಡಿ., ಮುಪ್ತಾರ್‌ಜಾನ್ ಮೆಹಬೂಬ್, ರಾಜಶ್ರೀ ರಮಣ್, ಜನಾರ್ಧನ, ಮುಖಂಡರುಗಳಾದ ಅಶ್ರಫ್ ನೆರಿಯ, ನವೀನ್ ರೈ ಬಾರ್ಯ, ಅಶೌಥ್ ಸೆಬಾಸ್ಟಿಯನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News