ಸಮಸ್ತ ಶರೀಅತ್ ಸಂರಕ್ಷಣಾ ಸಮ್ಮೇಳನಕ್ಕೆ ಯುನಿವೆಫ್ ಬೆಂಬಲ ಘೋಷಣೆ

Update: 2018-12-08 04:46 GMT

ಮಂಗಳೂರು, ಡಿ.8: ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿಯ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಡಿ.9ರಂದು ಹಮ್ಮಿಕೊಂಡಿರುವ 'ಶರೀಅತ್ ಸಂರಕ್ಷಣಾ ಸಮ್ಮೇಳನ'ಕ್ಕೆ 'ಯುನಿವೆಫ್ ಕರ್ನಾಟಕ' ಸಂಪೂರ್ಣ ಬೆಂಬಲ ಘೋಷಿಸಿದೆ.

ಸೈದ್ಧಾಂತಿಕ ಮತ್ತು ಕರ್ಮಶಾಸ್ತ್ರೀಯ ಭಿನ್ನತೆಗಳನ್ನು ಬದಿಗಿಟ್ಟು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಮುಸ್ಲಿಮ್ ಸಮುದಾಯ ಒಂದಾಗಬೇಕಾದ ಕಾಲ ಸನ್ನಿಹಿತವಾಗಿದೆ. ಫ್ಯಾಸಿಸ್ಟ್ ಶಕ್ತಿಗಳು ಭಾರತದಲ್ಲಿ ಇಸ್ಲಾಮ್ ಮತ್ತು ಅದರ ಅನುಯಾಯಿಗಳ ಮೇಲೆ ನಡೆಸುತ್ತಿರುವ ದಾಳಿಗಳು ಆಕಸ್ಮಿಕವಲ್ಲ. ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯಲ್ಲಿ ಮುಸ್ಲಿಮರು ಬಹಳ ದೊಡ್ಡ ತೊಡಕಾಗಿದ್ದಾರೆ. ಮುಸ್ಲಿಮರನ್ನು ದಮನಿಸಲು, ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು, ಪದೇ ಪದೇ ಅವರ ಮೇಲೆ ಸುಳ್ಳಾರೋಪ ಹೊರಿಸಿ, ಇಸ್ಲಾಮಿನ ತೇಜೋವಧೆ ಮಾಡಲು ಇಲ್ಲಿನ ಫ್ಯಾಸಿಸ್ಟ್ ಶಕ್ತಿಗಳು ಶ್ರಮಿಸುತ್ತಿವೆ. ಇಂಥ ಷಡ್ಯಂತ್ರಗಳನ್ನು ದಮನಿಸಿ ಭಾರತದ ಬಹುತ್ವವನ್ನು ಉಳಿಸಿಕೊಂಡು ಸೌಹಾರ್ದ ಸಮಾಜ ನಿರ್ಮಾಣದ ಗುರಿಯನ್ನು ಯುನಿವೆಫ್ ಕರ್ನಾಟಕ ಹೊಂದಿಕೊಂಡಿದೆ. ಅದಕ್ಕೆ ಪೂರಕವಾದಂಥ ಕಾರ್ಯಕ್ರಮಗಳಿಗೆ ಸದಾ ಬೆಂಬಲವನ್ನು ನೀಡಿ ಸಮುದಾಯದ ಒಗ್ಗಟ್ಟಿಗೆ ಕೂಡಾ ಯುನಿವೆಫ್ ಕರ್ನಾಟಕ ಸದಾ ಶ್ರಮಿಸುತ್ತಿದೆ. ಹಾಗಾಗಿ ಸಮಸ್ತದ ಈ ಸಮ್ಮೇಳನ ಕಾಲದ ಬೇಡಿಕೆಯಾಗಿದೆ. ಇದು ಕೇವಲ ಒಂದು ಸಂಘಟನೆಯ ಜವಾಬ್ದಾರಿ ಮಾತ್ರವಲ್ಲ. ಸಮುದಾಯದ ಉಳಿವಿಗಾಗಿ ಎಲ್ಲಾ ಸಮಾನ ಮನಸ್ಕ ಸಂಘಟನೆಗಳೂ ಈ ಸಮ್ಮೇಳನಕ್ಕೆ ಬೆಂಬಲ ಘೋಷಿಸಬೇಕಾಗಿದೆ. ಹಾಗಾಗಿ ಯುನಿವೆಫ್ ಕರ್ನಾಟಕ ಈ ಸಮ್ಮೇಳನಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ ಎಂದು ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News