ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರುಗು ನೀಡಿದ ಮೆರವಣಿಗೆ

Update: 2018-12-08 08:44 GMT

ಬಂಟ್ವಾಳ, ಡಿ.8: ತಾಲೂಕು 19ನೆ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಮುನ್ನ ನಡೆದ ಆಕರ್ಷಕ ಮೆರವಣಿಗೆ ನೋಡುಗರ ಮನಸೆಳೆಯಿತು.

ತುಂಬೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತುಂಬೆ ಬಿ.ಎ. ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಅಬ್ದುಲ್ ಸಲಾಂ ಮೆರವಣಿಗೆಗೆ ಚಾಲನೆ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಕೃಷ್ಣ ಕುಮಾರ್ ಪೂಂಜಾ ಕನ್ನಡ ಭುವನೇಶ್ವರಿಗೆ ಹೂವಿನ ಹಾರ ಹಾಕುವ ಮೂಲಕ ಹಸಿರು ನಿಶಾನೆ ನೀಡಿದರು.

ತುಂಬೆ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಹೊರಟ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡೆಗೋಳಿ, ಮಾರಿಪಳ್ಳ ಮೂಲಕ ಸಮ್ಮೇಳನದ ಎ.ಕೆ.ಮಹಾಬಲ ಶೆಟ್ಟಿ ಸಭಾಂಗಣದಲ್ಲಿ ಸಂಪನ್ನಗೊಂಡಿತು.

ಮೆರವಣಿಗೆಯಯಲ್ಲಿ ಸ್ವಾಗತ ತಂಡ, ಪೂರ್ಣ ಕುಂಭ ಕಲಶ, ಬ್ಯಾಂಡ್ ಸೆಟ್, ದುಡಿ ಕುಣಿತ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಎನ್‌ಸಿಸಿ ತಂಡ, ಅಳಿಕೆ ಪ್ರಗತಿ ಶಾಲೆ ಕುಕ್ಕಾಜೆ ಶಾಲಾ ಮಕ್ಕಳ ಬ್ಯಾಂಡ್ ಸೆಟ್, ತುಂಬೆ ಪ್ರೌಢಶಾಲಾ ಮಕ್ಕಳ, ಬಿ.ಎ.ಐಟಿಐ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು. ಹಾಗೆಯೇ ಕಂಬಳದ ಎತ್ತುಗಳು, ಟ್ಯಾಬ್ಲೋ, ಸ್ಯಾಕ್ಸೋಫೋನ್ ವಾದನ, ಭುವನೇಶ್ವರಿಯ ಸ್ತಬ್ಧಚಿತ್ರ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ಮೆರವಣಿಗೆಯ ಕೊನೆಯಲ್ಲಿ ತುಂಬೆ ಐಟಿಐ ಕಾಲೇಜಿನ ವಿದ್ಯಾರ್ಥಿ ತಂಡವು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸುವ ಮೂಲಕ ಗಮನಸೆಳೆಯಿತು.

ಸಮ್ಮೇಳನಾಧ್ಯಕ್ಷ ಪ್ರೊ.ತುಕರಾಮ ಪೂಜಾರಿ, ಜಿಲ್ಲಾ ಕಸಾಪ ಅಧ್ಯಕ್ಷ ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮೋಹನ್ ರಾವ್ ಅವರನ್ನು ತೆರೆದ ವಾಹನದಲ್ಲಿ ಕರೆತರಲಾಯಿತು. ಬಳಿಕ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಹಾಗೂ ಕತರ್ ಕರ್ನಾಟಕ ಸಂಘದ ಉಪಾಧ್ಯಕ್ಷ ಮೂಡಂಬೈಲು ರವಿ ಭಟ್ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News