ರಣಜಿ ಟ್ರೋಫಿ: ವಿಶ್ವ ದಾಖಲೆ ನಿರ್ಮಿಸಿದ ಅಜಯ್
ಇಂದೋರ್,ಡಿ.8: ಮಧ್ಯಪ್ರದೇಶ ಆರಂಭಿಕ ಆಟಗಾರ ಅಜಯ್ ರೊಹೆರಾ ತನ್ನ ಚೊಚ್ಚಲ ಪಂದ್ಯದಲ್ಲೇ ಔಟಾಗದೆ 267 ರನ್ ಗಳಿಸುವುದರೊಂದಿಗೆ ದಾಖಲೆ ಪುಸ್ತಕಕ್ಕೆ ತನ್ನ ಹೆಸರು ಸೇರ್ಪಡೆಗೊಳಿಸಿದರು.
ಶನಿವಾರ ಹೈದರಾಬಾದ್ ವಿರುದ್ಧ ನಡೆದ ರಣಜಿ ಟ್ರೋಫಿಯ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಅಜಯ್ 345 ಎಸೆತಗಳಲ್ಲಿ 21 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ ಅಜೇಯ 267 ರನ್ ಗಳಿಸಿದರು. ಇದು ವಿಶ್ವ ದಾಖಲೆಯ ಸ್ಕೋರಾಗಿದೆ. ವಿಶ್ವವೇ ತಿರುಗಿನೋಡುವ ಸಾಧನೆ ಮಾಡಿದ 21ರ ಹರೆಯದ ಅಜಯ್ ಮುಂಬೈನ ಮಾಜಿ ದಿಗ್ಗಜ ಆಟಗಾರ ಅಮೊಲ್ ಮಝುಂದಾರ್ ದಾಖಲೆಯನ್ನು ಮುರಿದರು. ಮಝುಂದಾರ್ 1994ರಲ್ಲಿ ಫರಿದಾಬಾದ್‌ನಲ್ಲಿ ಹರ್ಯಾಣ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ 260 ರನ್ ಗಳಿಸಿದ್ದರು. ಮಝುಂದಾರ್ ಟ್ವಿಟರ್‌ನ ಮೂಲಕ ಯುವ ದಾಂಡಿಗ ಅಜಯ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಜಯ್ 345 ಇನಿಂಗ್ಸ್‌ನಲ್ಲಿ 21 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದರು. ಅಜಯ್ ಸಾಹಸದಿಂದ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 562 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.