×
Ad

ಲಕ್ಷಾಂತರ ರೂ. ಮೌಲ್ಯದ ನಗದು ಚೀಲ ದರೋಡೆ ಪ್ರಕರಣ; ಇಬ್ಬರು ಸೆರೆ, 16 ಲಕ್ಷ ರೂ. ವಶ

Update: 2018-12-08 20:29 IST

ಮಂಗಳೂರು, ಡಿ.8: ಬಿಜೈ ಶ್ರೀರಾಮ ಭಜನಾ ಮಂದಿರ ರಸ್ತೆ ಮೂಲಕ ಮನೆಗೆ ಹೋಗುತ್ತಿದ್ದ ಹಿರಿಯ ನಾಗರಿಕರೊಬ್ಬರಿಗೆ ಹಲ್ಲೆ ಮಾಡಿ ಅವರಿಂದ 27ಲಕ್ಷ ರೂ. ಇದ್ದ ನಗದು ಚೀಲ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕೇಂದ್ರ ಉಪವಿಭಾಗದ ರೌಡಿ ನಿಗ್ರಹದಳದ ಪೊಲೀಸರು ಬಂಧಿಸಿ, 16,57,000 ರೂ. ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಇಳಂತಿಲ ನಿವಾಸಿ ಮುಹಮ್ಮದ್ ಶಾಫಿ (26), ಇಳಂತಿಲ ನೆಜಿಕಾರ್ ನಿವಾಸಿ ಮುಹಮ್ಮದ್ ಶಾಫಿ (19) ಬಂಧಿತ ಆರೋಪಿಗಳು. ಆರೋಪಿ ಗಳಿಂದ 16,57,000 ರೂ. ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 17,17,000ರೂ. ವಶಪಡಿಸಿಕೊಳ್ಳಲಾಗಿದೆ.

ಅ. 20ರಂದು ರಾತ್ರಿ 7:30ರ ವೇಳೆಗೆ ಗಣೇಶ್ ಕಾಮತ್ (64) ಎಂಬವರು ಬಿಜೈ ಶ್ರೀರಾಮ ಭಜನಾ ಮಂದಿರ ರಸ್ತೆಯಿಂದಾಗಿ ಮನೆಕಡೆಗೆ ಹೋಗುತ್ತಿದ್ದ ಸಮಯ ಅವರನ್ನು ದೂಡಿಹಾಕಿ ಹಲ್ಲೆ ಮಾಡಿ, ಅವರ ಕೈಯಲ್ಲಿದ್ದ 27 ಲಕ್ಷ ರೂ. ಹಣವಿದ್ದ ಚೀಲವನ್ನು ದರೋಡೆ ಮಾಡಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಭಾಸ್ಕರ್ ಒಕ್ಕಲಿಗೆ ಮಾರ್ಗದರ್ಶನದಂತೆ ಕೇಂದ್ರ ಉಪ ವಿಭಾಗ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಎಸ್ಸೈ ಪ್ರದೀಪ್ ಟಿ.ಆರ್. ಹಾಗೂ ಸಿಬ್ಬಂದಿ ವೆಲೆಸ್ಟೀನ್ ಜಾರ್ಜ್ ಡಿಸೋಜ, ಗಂಗಾಧರ ಎನ್., ಸಂತೋಷ ಸಸಿಹಿತ್ಲು, ಕಿಶೋರ್ ಕೋಟ್ಯಾನ್, ಪ್ರಮೋದ್ ಮೇರಿಹಿಲ್, ನಾಗರಾಜ ಚಂದರಗಿ, ಬಸವರಾಜ ನಾಯ್ಕ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News