×
Ad

ಸರ್ಕ್ಯೂಟ್ ಹೌಸ್‌ನಲ್ಲಿ ಜರ್ಮನ್ ಶೆಫರ್ಡ್ ಶ್ವಾನಗಳ ವಾಸ್ತವ್ಯ; ವಿವಾದ ಸೃಷ್ಟಿ

Update: 2018-12-08 22:34 IST

ಮಂಗಳೂರು, ಡಿ.8: ಸಾಮಾನ್ಯವಾಗಿ ಗಣ್ಯರ ವಾಸ್ತವ್ಯಕ್ಕೆ ಮೀಸಲಾಗಿರಿಸುವ ಮಂಗಳೂರು ನಗರದ ಕದ್ರಿಯ ಹೊಸ ಸರ್ಕ್ಯೂಟ್ ಹೌಸ್‌ನ್ನು ಜರ್ಮನ್ ಶೆಫರ್ಡ್ ಶ್ವಾನಗಳ ವಾಸ್ತವ್ಯಕ್ಕೆ ನೀಡುವ ಮೂಲಕ ವಿವಾದ ಸೃಷ್ಟಿಯಾಗಿದೆ. ಈ ಕುರಿತ ಸುದ್ದಿಯೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಗಳೂರಿನಲ್ಲಿ ಶನಿವಾರ ಮತ್ತು ರವಿವಾರ ನಡೆಯುತ್ತಿರುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ರಾಜ್ಯದ ನಾನಾ ಕಡೆಗಳಿಂದ ಶ್ವಾನದೊಂದಿಗೆ ಸ್ಪರ್ಧಿಗಳು ಆಗಮಿಸಿದ್ದಾರೆ. ಈ ಪೈಕಿ ಜರ್ಮನ್ ಶೆಫರ್ಡ್ ತಳಿಯ ಶ್ವಾನವೂ ಆಗಮಿಸಿದೆ. ಇಂತಹ ಎರಡ್ಮೂರು ಶ್ವಾನಗಳನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಕರೆತಂದಿದ್ದಾರೆ. ಈ ಶ್ವಾನಗಳು ಹವಾನಿಯಂತ್ರಿತ ವ್ಯವಸ್ಥೆಗೆ ಹೊಂದಿಕೊಂಡಿವೆ. ಆದರೆ ಮಂಗಳೂರಿನ ವಸತಿಗೃಹಗಳು ಶ್ವಾನಗಳಿಗೆ ಎಸಿ ರೂಂ ನೀಡಲು ನಿರಾಕರಿಸಿವೆ. ಹಾಗಾಗಿ ಈ ಶ್ವಾನ ಮಾಲಕರು ಸರಕಾರಿ ಸ್ವಾಮ್ಯದ ಸರ್ಕ್ಯೂಟ್ ಹೌಸ್‌ಗೆ ಎಡತಾಕಿದ್ದಾರೆ.

ಶುಕ್ರವಾರ ಸಂಜೆ ಆಗಮಿಸಿದ ಶ್ವಾನ ಮಾಲಕರು ಶನಿವಾರ ಶ್ವಾನ ಪ್ರದರ್ಶನ ಮುಗಿಸಿ ವಾಪಸ್ ಆಗಿದ್ದಾರೆ. ಆದರೆ ಸರ್ಕ್ಯೂಟ್ ಹೌಸ್‌ನ ಮೇಲ್ವಿಚಾರಕರು ಇದನ್ನು ನಿರಾಕರಿಸಿದ್ದಾರೆ. ಶ್ವಾನ ಮಾಲಕರು ರೂಂ ಕೇಳಿಕೊಂಡು ಬಂದಿದ್ದು ನಿಜ. ಆದರೆ ರೂಂ ನೀಡಲು ಸಾಧ್ಯವಿಲ್ಲ ಎಂದು ಸಾಗಹಾಕಿದ್ದೇವೆ. ಇದನ್ನು ನೋಡಿದ ಕೆಲವರು ಜಾಲತಾಣಗಳಲ್ಲಿ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.

ಶ್ವಾನಗಳ ವಾಸ್ತವ್ಯಕ್ಕೆ ಸರ್ಕ್ಯೂಟ್ ಹೌಸ್‌ನ್ನು ನೀಡಲಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಶ್ವಾನಗಳ ಮಾಲಕರು ಕೊಠಡಿ ಕಾದಿರಿಸಿದ್ದಾರೆ. ಆದರೆ ಶ್ವಾನಗಳಿಗೆ ಕೊಠಡಿ ನೀಡಿಲ್ಲ ಎಂದು  ಉತ್ತರ ನೀಡಿದ್ದಾರೆ.

ಈ ಹೊಸ ಸರ್ಕ್ಯೂಟ್ ಹೌಸ್‌ನಲ್ಲಿ ಮೊದಲ ಮಹಡಿಯಲ್ಲಿ ಅತಿ ವಿವಿಐಪಿಗಳಿಗೆ ನೀಡುವ ಸೂಟ್ ರೂಂ ಇದೆ. ಅಂದರೆ ಇದರಲ್ಲಿ ಒಂದು ಹಾಲ್, ಬೆಡ್‌ರೂಂ ಹಾಗೂ ವಾರ್ಡ್ ರೂಂ ಇದೆ. ಪ್ರಧಾನಿ, ಮುಖ್ಯಮಂತ್ರಿ ಸಮೇತ ಗಣ್ಯಾತಿಗಣ್ಯರು ಇದೇ ಸೂಟ್ ರೂಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡನೇ ಮಹಡಿಯಲ್ಲಿ ಒಟ್ಟು 8 ರೂಂಗಳಿದ್ದು, 6 ರೂಂಗಳು ಹವಾನಿಯಂತ್ರಿತ ಹೊಂದಿದೆ.

ಲಭ್ಯ ಮಾಹಿತಿ ಪ್ರಕಾರ, ಈ ಹವಾನಿಯಂತ್ರಿತ ರೂಂಗಳನ್ನು ಶ್ವಾನಗಳ ಮಾಲಕರ ವಾಸ್ತವ್ಯಕ್ಕೆ ನೀಡಲಾಗಿದೆ. ಇದೇ ವೇಳೆ ಮಾಲಕರ ಜೊತೆಗೆ ಶ್ವಾನಗಳೂ ಎಸಿ ರೂಂನಲ್ಲಿ ಮುದುಡಿಕೊಂಡಿವೆ ಎಂದು ಹೇಳಲಾಗಿದೆ. ಆದರೆ ವಿವಾದದಿಂದ ಪಾರಾಗಲು ಈಗ ಕೊಠಡಿ ನೀಡಿರುವುದನ್ನೇ ನಿರಾಕರಿಸಲಾಗುತಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News