ಧರ್ಮಸ್ಥಳ ಮಸ್ತಕಾಭಿಷೇಕ: ಶ್ರೀಮುಖ ಪತ್ರಿಕೆ ಬಿಡುಗಡೆ

Update: 2018-12-08 17:16 GMT

ಬೆಳ್ತಂಗಡಿ, ಡಿ. 8:  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 9 ರಿಂದ 18 ರವರೆಗೆ ನಡೆಯಲಿರುವ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ  ಹತ್ತು ದಿನಗಳು ನಡೆಯುವ ಧಾರ್ಮಿಕ, ಪೂಜಾ ಕಾರ್ಯಕ್ರಮಗಳ ವಿವರಗಳುಳ್ಳ ಶ್ರೀಮುಖ ಪತ್ರಿಕೆಯನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು ಬಿಡುಗಡೆಗೊಳಿಸಿದರು.

ಫೆ. 9 ರಂದು ಮುಂಜಾನೆ 6 ಗಂಟೆಗೆ ಭಗವಾನ್ ಶ್ರೀ ಚಂದ್ರನಾಥ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ, ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿಗೆ ಅಗ್ರೋದಕ ಮೆರವಣಿಗೆ ನಡೆದು ಶ್ರೀ ಬಾಹುಬಲಿ ಬೆಟ್ಟದಲ್ಲಿ ಇಂದ್ರ ಪ್ರತಿಷ್ಠೆ ಕಾರ್ಯಕ್ರಮಗಳ ಮೂಲಕ ಆರಂಭದಲ್ಲಿಂದ ಫೆ. 18 ರಂದು ನಡೆಯುವ ಧ್ವಜಾವರೋಹಣ, ತೋರಣ ವಿಸರ್ಜನೆಯವರೆಗಿನ ಎಲ್ಲಾ ದಿನಗಳ ಕಾರ್ಯಕ್ರಮಗಳ ವಿವರಗಳನ್ನು ಶ್ರೀಮುಖ ಪತ್ರಿಕೆ ಒಳಗೊಂಡಿದೆ. 

ಪ್ರತಿ ದಿನ ಪಾದಾಭಿಷೇಕ, ಮಹಾಮಂಗಳಾರತಿ, ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ದಿನಗಳಲ್ಲಿ ಪರಮ ಪೂಜ್ಯ ಆಚಾರ್ಯರು, ಮುನಿವರ್ಯರು ಸ್ವಸ್ತಿ ಶ್ರೀ ಭಟ್ಟಾರಕ ಸ್ವಾಮೀಜಿಯವರುಗಳಿಂದ ಮಂಗಳ ಪ್ರವಚನ, ವಿದ್ವಾಂಸರಿಂದ ಧರ್ಮೋಪದೇಶ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಪ್ರಧಾನ ಸಂಚಾಲಕರಾದ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸಂಚಾಲಕರಾದ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ಡಾ.ಬಿ.ಯಶೋವರ್ಮ, ಮಾಧ್ಯಮ ಸಮಿತಿಯ ಪೂರನ್ ವರ್ಮಾ, ಪ್ರಸನ್ನ ಕುಮಾರ್, ಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿ ಎ.ವಿ.ಶೆಟ್ಟಿ, ಪ್ರಬಂಧಕರಾದ ಮಹಾವೀರ ಅಜ್ರಿ, ಕಲಶ ಸಮಿತಿಗಳ ಸಂಯೋಜಕರಾದ ಪುಷ್ಪರಾಜ್ ಜೈನ್, ಪ್ರಸನ್ನ ಕುಮಾರ್, ಅಮೃತ ಮಲ್ಲ, ಸ್ವಾಗತ ಸಮಿತಿಯ ಸದಸ್ಯರಾದ ಶೋಭಾಕರ ಬಲ್ಲಾಳ್, ರಾಜೇಂದ್ರ ಶೆಟ್ಟಿ, ಪ್ರಚಾರ ಸಮಿತಿಯ ಸಂಯೋಕರಾದ ಜಯಶಂಕರ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News