ಪ್ರೊ ಕಬಡ್ಡಿ: ಮುಂಬಾ, ಟೈಟಾನ್ಸ್ ಗೆ ಜಯ
Update: 2018-12-09 10:16 IST
ವಿಶಾಖಪಟ್ಟಣ, ಡಿ.8: ಪ್ರೊ ಕಬಡ್ಡಿ ಲೀಗ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯು ಮುಂಬಾ ಹಾಗೂ ಆತಿಥೇಯ ತೆಲುಗು ಟೈಟಾನ್ಸ್ ತಂಡಗಳು ಜಯಭೇರಿ ಬಾರಿಸಿವೆ.
ದಿನದ ಮೊದಲ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಮುಂಬಾ ತಂಡ ಬಂಗಾಳ ವಾರಿಯರ್ಸ್ ತಂಡವನ್ನು 31-20 ಅಂತರದಿಂದ ಸೋಲಿಸಿತು. ಮುಂಬಾ ಪರ ರೈಡರ್ ಸಿದ್ಧಾರ್ಥ್ ದೇಸಾಯಿ ಏಳಂಕ ಗಳಿಸಿದರು. ಫಝಲ್ ಅಟ್ರಚಲಿ, ಸುರೇಂದ್ರ ಸಿಂಗ್ ಹಾಗೂ ಧರ್ಮರಾಜ್ ಒಟ್ಟು 11 ಅಂಕ ಕಲೆ ಹಾಕಿದರು. ಬಂಗಾಳದ ಪರ ಮಣಿಂದರ್ ಸಿಂಗ್ ಐದಂಕ ಗಳಿಸಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 36-26 ಅಂತರದಿಂದ ಮಣಿಸಿತು. ಟೈಟಾನ್ಸ್ ಪರ ನೀಲೇಶ ಸಾಳುಂಕೆ ಹಾಗೂ ರಾಹುಲ್ ಚೌಧರಿ ತಲಾ 8 ಅಂಕ ಗಳಿಸಿದ್ದಾರೆ. ಜೈಪುರ ಪರ ದೀಪಕ್ ಹೂಡಾ 10 ಅಂಕ ಗಳಿಸಿದ್ದಾರೆ.