ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಉಲ್ಲಂಘನೆ: ನಳಿನ್ ಆರೋಪ
ಬಂಟ್ವಾಳ, ಡಿ. 9: ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮವನ್ನು ಪ್ರೊಟೋಕಾಲ್ ಉಲ್ಲಂಘನೆ ಮಾಡಲಾಗಿದೆ. ಇದನ್ನು ಸರಕಾರಿ ಕಾರ್ಯಕ್ರಮವಾಗಿಸದೆ ಕಾಂಗ್ರೆಸ್ ಕಾರ್ಯಕ್ರಮವನ್ನಾಗಿಸಿದ್ದು, ನಮ್ಮ ಶಾಸಕರು, ಸಂಸದರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಇದನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿ.ಸಿ.ರೋಡ್‍ನ ಶಾಸಕರ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜೊತೆ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸಚಿವ ರಮಾನಾಥ ರೈ ಅವರು ತಮ್ಮ ಪಡೆಯನ್ನು ತಂದು ಇದನ್ನು ಕಾಂಗ್ರೆಸ್ ಕಾರ್ಯಕ್ರಮವನ್ನಾಗಿಸಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನೂ ನಿಲ್ಲಿಸಲು ನಾವು ಸೂಚನೆ ನೀಡಿದೆವು. ಆದರೆ, ಬಂದಿರುವ ಜನರಿಗೆ ತೊಂದರೆಯಾಗದಂತೆ ಹಕ್ಕುಪತ್ರ ವಿತರಿಸಲು ತಿಳಿಸಿದ್ದೇವೆ ಎಂದರು.
ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಮತ್ತು ಅವರ ತಂಡದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜನ ಸೇರಿಸಿ, ಗಲಭೆ ಸೃಷ್ಟಿಸಿ ಶಾಸಕರಿಗೆ ಅವಮಾನ ಮಾಡಲಾಗಿದೆ. ಎಎಸ್ಪಿ, ಎಸಿ ಈ ಸಂದರ್ಭ ಮೌನವಾಗಿರುವುದು ರಾಜಕೀಯ ಕೈಗೊಂಬೆಯಾಗಿರುವುದನ್ನು ಸೂಚಿಸುತ್ತದೆ. ಇಲ್ಲಿ ಕಾಂಗ್ರೆಸ್ ಗೂಂಡಾ ವರ್ತನೆ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವರ್ತನೆ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಗೋವಿಂದ ಪ್ರಭು, ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.