ಸಂಗೀತ ಕೇವಲ ಮನರಂಜನೆಯಲ್ಲ, ದೇವರ ಸೇವೆ: ಅದಮಾರು ಶ್ರೀ

Update: 2018-12-09 14:47 GMT

ಉಡುಪಿ, ಡಿ.9: ಸಂಗೀತ, ನೃತ್ಯಗಳು ಕೇವಲ ಮನರಂಜನೆಯಲ್ಲ. ಅದು ದೇವರ ಸೇವೆ ಎಂಬ ಭಾವನೆ ಮೂಡಬೇಕು. ಆಗ ಮಾತ್ರ ಅದರಲ್ಲಿ ಸಾರ್ಥಕತೆ ಬರಲು ಸಾಧ್ಯ ಎಂದು ಅದಮಾರು ಮಠಾಧೀಶ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಸಂಗೀತ ನೃತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಂದನ್ನು ಭಗವಂತ ಕೊಟ್ಟದ್ದು ಎಂಬ ಚಿಂತನೆ ಬಂದಾಗ ಭಗವಂತ ನನ್ನು ಕಾಣಬಹುದಾಗಿದೆ ಪ್ರತಿಯೊಬ್ಬರೂ ದೇವರನ್ನು ಕಾಣುವ ದೃಷ್ಠಿ ಬರ ಬೇಕು ಎಂದು ಅವರು ತಿಳಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಅಶೋಕ ಎನ್.ಚಲವಾದಿ ಮಾತನಾಡಿ, ಅಕಾಡೆಮಿ ಪ್ರತಿವರ್ಷ ಆರು ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತ ಬಂದಿದೆ. ರಾಜ್ಯದ 150-200 ಕಲಾವಿದರಿಗೆ 10ಸಾವಿರ ರೂ. ಶಿಷ್ಯವೇತನವನ್ನು ನೀಡ ಲಾಗುತ್ತಿದೆ. ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಸಂಗೀತ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡ ಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಅಕಾಡೆಮಿ ಸದಸ್ಯ ಉಳ್ಳಾಲ ಮೋಹನ್ ಕುಮಾರ್, ಟಿ.ರಂಗ ಪೈ, ನಾಗಸ್ವರ ಕಲಾವಿದ ನಾಗೇಶ್ ಬಪ್ಪನಾಡು ಉಪಸ್ಥಿತರಿದ್ದರು. ಸದಸ್ಯ ಸಂಚಾಲಕ ಅರವಿಂದ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವಿ.ಮಣ್ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಉತ್ಸವದಲ್ಲಿ ಅವಕಾಶ ನೀಡಿ

ಮಂಗಳೂರಿನಲ್ಲಿ ನಡೆಯುವ ಕರಾವಳಿ ಉತ್ಸವದಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳಿಗೆ ನೀಡುವ ಪ್ರಾಧನ್ಯತೆ, ಉಡುಪಿ ಉತ್ಸವದಲ್ಲಿ ಇಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಿ ಉಡುಪಿ ಉತ್ಸವದಲ್ಲಿ ಸಂಗೀತಕ್ಕೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸದಸ್ಯ ಸಂಚಾಲಕ ಅರವಿಂದ ಹೆಬ್ಬಾರ್ ಒತ್ತಾಯಿಸಿದರು.

ಕರಾವಳಿಯಲ್ಲಿ ಅಕಾಡೆಮಿಯ ಶಿಷ್ಯವೇತನಕ್ಕೆ ಅರ್ಜಿ ಹಾಕುವವರೇ ಇಲ್ಲ. ಅಕಾಡೆಮಿಯ ಅಧ್ಯಕ್ಷರು, ಸದಸ್ಯರು ಹೆಸರಿಗೆ ಮಾತ್ರ ಎಂಬ ಸ್ಥಿತಿ ನಿರ್ಮಾಣ ವಾಗಿದೆ. ನಮ್ಮಿಂದ ಸಂಗೀತ, ನೃತ್ಯ ಕ್ಷೇತ್ರಕ್ಕೆ ಏನು ಮಾಡುವ ಸ್ಥಿತಿ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News