ಕೋಮುವಾದಿ ಶಕ್ತಿಗಳಿಂದ ಮಹಿಳೆಯರ ಮೇಲೆ ದಾಳಿ: ವಿ.ಗೀತಾ

Update: 2018-12-09 14:51 GMT

ಉಡುಪಿ, ಡಿ. 9: ಇಂದು ದೇಶದಲ್ಲಿ ಕೋಮುವಾದವು ಮಹಿಳೆಯರ ಮೇಲೆ ದಾಳಿ ನಡೆಸುತ್ತಿದೆ. ಮಹಿಳೆಯರಲ್ಲಿ ಮೌಢ್ಯತೆ ತುಂಬಿಸಿ ಶಬರಿಮಲೆ ಪ್ರವೇಶ ಅಪರಾಧವೆಂಬ ಭಾವನೆ ಮೂಡಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಆಳುವ ಶಕ್ತಿಗಳೇ ಮುಂದಾಗುತ್ತಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ಆರೋಪಿಸಿದ್ದಾರೆ.

ಕುಂದಾಪುರ ಹಂಚು ಕಾರ್ಮಿಕ ಭವನದಲ್ಲಿ ರವಿವಾರ ನಡೆದ ಜನವಾದಿ ಮಹಿಳಾ ಸಂಘಟನೆಯ ಪ್ರಥಮ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ರಚಿಸುವಂತೆ ತೀರ್ಪು ನೀಡಿದ್ದರೂ ಕೇಂದ್ರ ಸರಕಾರ ಅದನ್ನು ಜಾರಿ ಮಾಡುತ್ತಿಲ್ಲ. ಈ ವಿಶಾಖ ತೀರ್ಪುನ್ನು ಸರಕಾರ ಕೂಡಲೇ ಜಾರಿ ಮಾಡ ೇಕು ಎಂದು ಅವರು ಆಗ್ರಹಿಸಿದರು.

ರೈತರ ಸಾಲಮನ್ನ ಬಗ್ಗೆ ಮಾತನಾಡುವ ಸರಕಾರವು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸ್ತ್ರೀ ಶಕ್ತಿ ಮೂಲಕ ಶೇ.4ರ ಬಡ್ಡಿದರದಲ್ಲಿ ಸಾಲಕೊಡುವ ಪ್ರಸ್ತಾಪ ಕೈಬಿಟ್ಟಿರುವುದು ಖಂಡನೀಯ. ಮಹಿಳೆಯರಿಗೆ ಸಾಲ ಕೊಡುವಂತೆ ಮಹಿಳಾ ಸಂಘಟನೆಗಳು ಹೋರಾಟ ಮಾಡಬೇಕಾಗಿದೆ ಎಂದರು.

ಮಹಿಳೆಯರು ಕುಟುಂಬ ನಿರ್ವಹಿಸಲು ಸಾಧ್ಯವಾಗುವಂತೆ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕೆಂದು ಅವರು ಒತ್ತಾಯಿಸಿದರು. ಕೋಮುವಾದ ವಿರೋಧಿಸಿ ಮತ್ತು ಶ್ರೀಮಂತರ ಪರವಾದ ಸರಕಾರದ ನೀತಿಗಳನ್ನು ಖಂಡಿಸಿ 2019 ಜನವರಿ 8 ಮತ್ತು 9ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಆರತಿ ಲಾಲು ಪ್ರಸನ್ನ, ಕಾರ್ಯದರ್ಶಿಯಾಗಿ ಶೀಲಾವತಿ, ಕೋಶಾ ಧಿಕಾರಿಯಾಗಿ ಲಲಿತ ಎಸ್. ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷತೆ ಯನ್ನು ಹಿರಿಯ ಮುಖಂಡರಾದ ಲಲಿತ ಎಸ್. ವಹಿಸಿದ್ದರು.

ಸಿಐಟಿಯು ಮುಖಂಡರಾದ ಮಹಾಬಲ ವಡೇರಹೋಬಳಿ, ಬಾಲಕೃಷ್ಣ ಶೆಟ್ಟಿ, ಎಚ್.ನರಸಿಂಹ, ಸುರೇಶ್ ಕಲ್ಲಾಗರ ಮಾತನಾಡಿದರು. ಪದ್ಮಾವತಿ ಶೆಟ್ಟಿ ಉಪಸ್ಥಿತರಿದ್ದರು. ಶೀಲಾವತಿ ಸಂಘಟನೆಯ ಕರಡು ವರದಿ ಮಂಡಿಸಿದರು. ಲೆಕ್ಕಪತ್ರವನ್ನು ಬಲ್ಕೀಸ್ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News