×
Ad

ಕುಂಚದಲ್ಲಿ ಮೂಡಿಬಂದ ಕೈಗಾರಿಕಾ ಮಾಲಿನ್ಯದ ವಿರಾಟ್‌ ದರ್ಶನ

Update: 2018-12-09 21:14 IST

ಮಂಗಳೂರು, ಡಿ.9: ಅಭಿವೃದ್ಧಿ ಹೆಸರಲ್ಲಿ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ವಿಪರೀತ ಎನ್ನುವಂತೆ ಪೈಪೋಟಿಯಲ್ಲಿ ಕೊಡುಗೆ ನೀಡುತ್ತಿವೆ. ಕೈಗಾರಿಕೆಗಳು ಉಗುಳುತ್ತಿರುವ ವಿಷಕಾರಿ ಹೊಗೆ, ಕಲುಷಿತ ನೀರಿನಿಂದಾಗಿ ಭೂಮಿ ತನ್ನ ಸತ್ವ ಕಳೆದುಕೊಂಡು ದಿನವೂ ಕರಗುವ ವಿರಾಟ್ ದರ್ಶನವನ್ನು ಕಲಾವಿದರು ಕುಂಚದಲ್ಲಿ ತೆರೆದಿಟ್ಟರು.

ಹೌದು. ಇದು ನಡೆದದ್ದು ನಗರದ ಕದ್ರಿ ಉದ್ಯಾನವನದಲ್ಲಿ ಕರಾವಳಿ ಚಿತ್ರಕಲಾ ಚಾವಡಿ, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯಿಂದ ರವಿವಾರ ಆಯೋಜಿಸಿದ್ದ ಕುಂಚ ಕಹಳೆ ಚಿತ್ರಕಲಾ ಶಿಬಿರದಲ್ಲಿ 16 ಚಿತ್ರಕಲಾದರು ಕುಂಚದಿಂದ ಜಾಗೃತಿ ಮೂಡಿದರು. ಜೊತೆಗೆ ಕಾಲೇಜು ವಿದ್ಯಾರ್ಥಿಗಳೂ ಸಹಕರಿಸಿದರು. ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಕೈಗಾರಿಕೆಗಳು ಸ್ಥಾಪನೆಯಾಗಿ ಕೃಷಿ, ನೀರು, ವಾಯುಮಾಲಿನ್ಯ ಹೆಚ್ಚುತ್ತಿರುವ ಬಗ್ಗೆ ಜಾಗೃತಿ ಮೂಡಿಸು ವಲ್ಲಿ ಕಲಾವಿದರು ಯಶಸ್ವಿಯಾದವರು.

ಹಸಿರಿನಿಂದ ಕಂಗೊಳಿಸುವ ಭೂಮಿ, ಝಳಝಳನೆ ಹರಿಯುವ ನದಿ-ಹೊಳೆ, ಪ್ರಾಣಿ-ಪಕ್ಷಿಗಳಿದ್ದ ಪರಿಸರದಲ್ಲಿ ನಮ್ಮ ಪೂರ್ವಜರು ಬದುಕಿ ಬಾಳಿದ ಚಿತ್ರಣವನ್ನು ಮುಂದಿನ ಮುಂದಿನ ಪೀಳಿಗೆಗೆ ‘ಎಲ್‌ಸಿಡಿ’ ಪರದೆಗಳಲ್ಲಿ ತಿಳಿಸುವ ದಿನಗಳು ದೂರವಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಹಿರಿಯ ಚಿತ್ರಕಲಾವಿದ ವಿಷ್ಣು ಶೇವಗೂರು ಬಿಡಿಸಿದ ಚಿತ್ರ ಎಲ್ಲವನ್ನೂ ವಿವರಿಸುತ್ತದೆ.

ಕೈಗಾರಿಕೆಗಳಿಂದ ಕಲುಷಿತಗೊಂಡ ನೀರು, ಬರಡಾಗಿರುವ ಭೂಮಿ, ಅಸ್ತಿಪಂಜರದಂತೆ ಅನಾಥವಾಗಿ ನಿಂತಿರುವ ಹಾಗೂ ಹಸಿರು ಎಲೆಗಳೇ ಇಲ್ಲದ ಮರಗಳ ರೆಂಬೆ-ಕೊಂಬೆಗಳು. ಬೂದು ಬಣ್ಣದಿಂದ ಆವರಿಸಿರುವ, ಕಾರ್ಮೋಡದಂತೆ ಭಾಸವಾಗುವ ಆಕಾಶ, ಇವೆಲ್ಲವುಗಳನ್ನು ನೋಡಿದರೆ ಜಗತ್ತಿನಲ್ಲಿ ಮನುಷ್ಯ ಬದುಕಲು ಸಾಧ್ಯವೇ ಇಲ್ಲದಂತಹ ಚಿತ್ರಣವನ್ನು ಕುಂಚದಲ್ಲಿ ವಿಷ್ಣು ಶೇವಗೂರು ತೆರೆದಿಟ್ಟಿದ್ದಾರೆ.

‘ಅರ್ಧನಾರೀಶ್ವರನ ಮಾದರಿಯ ವರ್ಣಚಿತ್ರವೊಂದರಲ್ಲಿ ಅರ್ಧ ಭಾಗದಲ್ಲಿ ಹಸಿರಿನಿಂದ ಕಂಗೊಳಿಸುವ ನದಿ, ಶ್ವೇತ ವರ್ಣ ಮಿಶ್ರಿತ ನೀಲಿ ಬಣ್ಣದಿಂದ ಹೊಯ್ದಿಡುವ ಸಮುದ್ರದ ಅಲೆಗಳು, ಸ್ವಚ್ಛಂದವಾಗಿ ಹಾರಾಡುವ ವಿವಿಧ ನಮೂನೆಯ ಚಿಟ್ಟೆಗಳು, ಕಣಕಣದಲ್ಲಿ ಕೇಸರಿಯಂತೆ ಹೊಳೆಯುತ್ತಿರುವ ಸೂರ್ಯನ ಚಿತ್ತಾರ ಮುಳಿಗೆದ್ದಿದೆ. ಇಡೀ ಭೂಮಿಯೇ ಸ್ವರ್ಗದಂತೆ ಭಾಸವಾಗುತ್ತದೆ.

ಇದಕ್ಕೆ ವಿರುದ್ಧವೆನ್ನುವಂತೆ ಇನ್ನೊಂದು ಭಾಗದಲ್ಲಿ ಜಗತ್ತೇ ಕೈಗಾರಿಕೆಗಳ ಆವಾಸಸ್ಥಾನವಾಗಿದೆ. ಕೈಗಾರಿಕೆಗಳಿಂದ ಆವರಿಸಿರುವ ದಟ್ಟನೆಯ ಹೊಗೆ, ಕೈಗಾರಿಕೆಯಿಂದ ನೇರವಾಗಿ ಸಮುದ್ರಕ್ಕೆ ಸೇರುವ ವಿಷಕಾರಿ ತ್ಯಾಜ್ಯದಿಂದ ಸಮುದ್ರವೇ ವಿಷವಾಗಿ ಪರಿವರ್ತನೆಗೊಂಡಿದೆ. ಫಲವತ್ತೆಯಿಂದ ಕೂಡಿದ ಹಸಿರಿನ ಸೀರೆಯನ್ನು ಹೊದ್ದುಕೊಂಡಿದ್ದ ಭೂಮಿಯು ಕೆಂದೂಳಾದ ದೃಶ್ಯವನ್ನು ಮುಖಕ್ಕೆ ರಾಚುವಂತೆ ಅಚ್ಚುಕಟ್ಟಾಗಿ ಚಿತ್ರ ಕಲಾವಿದೆ ಭಾಗೀರಥಿ ಭಂಡಾರ್‌ಕರ್ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ.

ಇನ್ನು ನವೀನ್‌ ಚಂದ್ರ ಕೋಡಿಕಲ್ ಬಿಡಿಸಿದ ಮಾಲಿನ್ಯಯುಕ್ತ ಜಗತ್ತಿನಲ್ಲಿ ಮನುಷ್ಯನ ದುರಂತದ ದಿನಗಳನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಕೈಗಾರಿಕೆಗಳ ಕರಾಳ ಮುಖವನ್ನು, ಅದರಿಂದ ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯ-ವಾಯು-ಜಲ ಮಾಳಿನ್ಯದಿಂದ ಮನಷು ಬದುಕಲು ಸಾಧ್ಯವೇ ಇಲ್ಲ ಎನ್ನುವುದನ್ನು ಬಾಯ್ಮೇಲೆ ಬೆರಳಿಟ್ಟು ನೋಡುವಂತಿದೆ. ಚಿತ್ರದಲ್ಲಿ ಯುವಕನೊಬ್ಬ ಸಣ್ಣ ಬಾಟಲಿಯೊಂದರಲ್ಲಿ ಗಿಡಿವನ್ನು ನೆಟ್ಟು, ಜೊತೆಗೆ ಕೃತಕ ಬೆಳಕನ್ನು ಕಲ್ಪಿಸಿದ್ದಾನೆ. ಅದಕ್ಕೆ ಮತ್ತೊಂದು ಬಾಟಲಿಯಿಂದ ನೀರನ್ನು ಹಾಯಿಸಿದ್ದಾನೆ. ಹೀಗೆ ಕೊಳವೆಗಳ ಮೂಲಕ ಆಮ್ಲಜನಕವನ್ನು ಪಡೆದು ಜೀವವನ್ನು ಉಳಿಸಿಕೊಳ್ಳುವ ದೃಶ್ಯವಿದೆ. ಮಾನವನ ಬುರುಡೆಯ ಆಕಾರದ ಬೆಳಕನ್ನು ತೋರಿಸಿ ಮನುಷ್ಯನ ಇರುವಿಕೆಯನ್ನು ತಿಳಿಸಲು ಚಿತ್ರಕಲಾವಿದ ಯತ್ನಿಸಿದ್ದಾರೆ.

ನಿಶಾ ನವೀನ್‌ಚಂದ್ರ, ಮನೋರಂಜಿನಿ, ಸೈಯದ್ ಆಸಿಫ್ ಅಲಿ, ಜಾನ್ ಚಂದ್ರನ್, ಸಪ್ನಾ ನರೋನ್ಹ, ಸುದೀರ್ ಕಾವೂರು, ಈರಣ್ಣ ತಿಪ್ಪಣ್ಣವರ್, ಪೂರ್ಣೇಶ್, ನವೀನ್‌ಚಂದ್ರ ಬಂಗೇರ, ಸತೀಶ್ ರಾವ್, ಜಯಶ್ರೀ ಶರ್ಮ, ರಚನಾ ಸೂರಜ್ ಅವರ ವರ್ಣ ಚಿತ್ರಗಳಲ್ಲಿ ಪರಿಸರಕ್ಕೆ ಕೈಗಾರಿಕೆಗಳ ದುಷ್ಪರಿಣಾಮಗಳ ಬಗ್ಗೆ ಸ್ಪಷ್ಟವಾಗಿ ಖಂಡಿಸಿದ್ದಾರೆ; ಜೊತೆಗೆ ಭೂಮಿಯನ್ನು ಹಸಿರಿನಿಂದ ಕಂಗೊಳಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಒಂದೆರಡು ಹೆಜ್ಜೆಗಳನ್ನು ಮುಂದಿಟ್ಟಿದ್ದಾರೆ.

ಕರಾವಳಿಯ ಧಾರಣಾ ಶಕ್ತಿಗಿಂತ ಮೀರಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಇದರಿಂದ ದಿನದಿಂದ ದಿನಕ್ಕೆ ಪರಿಸರಕ್ಕೆ ಹೆಚ್ಚು ಮಾಲಿನ್ಯ ಸೇರ್ಪಡೆಗೊಳ್ಳುತ್ತಿದೆ. ಸಾರ್ವಜನಿಕರಿಗೆ ಜನಜಾಗೃತಿಯನ್ನು ಮೂಡಿಸಲು ಕುಂಚ ಕಹಳೆ ಚಿತ್ರಕಲಾ ಶಿಬಿರವನ್ನು ಕಳೆದ 10-12 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ.

- ಬಿ.ಗಣೇಶ್ ಸೋಮಯಾಜಿ,
ಕರಾವಳಿ ಚಿತ್ರಕಲಾ ಚಾವಡಿ ಗೌರವಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News