ಅಮ್ಮಣ್ಣಿ ಡಂಗು ಪಾಣಾರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

Update: 2018-12-09 15:49 GMT

ಉಡುಪಿ, ಡಿ.9: ಜಾನಪದಿಯ ಕಲಾ ಪ್ರಕಾರವಾದ ಪಾಡ್ದಾನದ ಮೂಲಕ ತುಳುನಾಡಿನ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿರುವ ಹಿರಿಯಡ್ಕ ಪಡ್ಡಮ ನಿವಾಸಿ ಅಮ್ಮಣ್ಣಿ ಡಂಗು ಪಾಣಾರ(75) ಈ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರಾವಳಿಯ ದೈವಾರಾಧಕ(ಪಾಣಾರ) ಕುಟುಂಬದಲ್ಲಿ ಜನಿಸಿರುವ ಇವರು 3ನೆ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಲ್ಲಿಯೇ ದೈವಗಳ ಇತಿಹಾಸ ಸಾರುವ ಪಾಡ್ಡನಗಳ ಬಗ್ಗೆ ಹೆಚ್ಚಿನ ಒಲವು ತೋರಿದ್ದ ಇವರು, ಇದೀಗ ತುಳು ನಾಡಿನ ಜಾನಪದಿಯ ಸಂಸ್ಕೃತಿಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲ ನೆಲದ ಮಣ್ಣಿಗೆ ಕೀರ್ತಿ ತಂದಿದ್ದಾರೆ.

ಇವರಿಗೆ ಕರಾವಳಿಯಲ್ಲಿ ಆರಾಧನೆಗೊಳ್ಳುತ್ತಿರುವ ಹೆಚ್ಚಿನ ದೈವಗಳ ಪಾಡ್ಡಾನ ಗಳು ಕಂಠಪಾಠವಾಗಿವೆ. ತನ್ನ ಅಮ್ಮನಿಂದ ಈ ಕಲೆಯನ್ನು ಕರಗತ ಮಾಡಿ ಕೊಂಡಿರುವ ಇವರು, ತನ್ನ 11ನೇ ವರ್ಷಕ್ಕೆ ಪಾಡ್ಡಾನ ಹೇಳಲು ಆರಂಭಿಸಿದ್ದಾರೆ. ಇವರ ಮೂರು ಮಕ್ಕಳಲ್ಲಿ ಮೊದಲ ಹಾಗೂ ಕೊನೆಯ ಪುತ್ರ ದೈವ ನರ್ತಕ ರಾಗಿದ್ದು, ಕಲಾ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

‘ಈ ಪ್ರಶಸ್ತಿ ದೊರೆತಿರುವುದು ತುಂಬಾ ಸಂತೋಷ ತಂದಿದೆ. ಯಾವತ್ತು ಕೂಡ ನಾನು ಈ ಪ್ರಶಸ್ತಿನ್ನು ನಿರೀಕ್ಷೆ ಮಾಡಿರಲಿಲ್ಲ. ಜಾನಪದ ಕ್ಷೇತ್ರದಲ್ಲಿ ನನ್ನನ್ನು ಗುರುತಿಸಿ ದೆಹಲಿವರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಪಾಡ್ಡಾನಾ ಹೇಳಲು ಆಗು ತ್ತಿಲ್ಲ ಎಂದು ಅಮ್ಮಣ್ಣಿ ಡಂಗು ಪಾಣಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News