ನಮ್ಮ ದೇಶವನ್ನು ನಮ್ಮ ಪಾಡಿಗೆ ಬಿಡಿ: ಟ್ರಂಪ್‌ ಗೆ ಫ್ರಾನ್ಸ್ ಒತ್ತಾಯ

Update: 2018-12-09 16:09 GMT

ಪ್ಯಾರಿಸ್, ಡಿ. 9: ಫ್ರಾನ್ಸ್ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡದಂತೆ ಫ್ರಾನ್ಸ್ ಸರಕಾರ ರವಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದೆ.

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ‘ಹಳದಿ ಬನಿಯನ್’ ಪ್ರತಿಭಟನೆ ಮತ್ತು ಪ್ಯಾರಿಸ್ ಪರಿಸರ ಒಪ್ಪಂದಕ್ಕೆ ಸಂಬಂಧ ಕಲ್ಪಿಸಿ ಟ್ರಂಪ್ ಶನಿವಾರ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.

‘‘ಅಮೆರಿಕದ ದೇಶಿ ರಾಜಕೀಯದಲ್ಲಿ ನಮಗೆ ಆಸಕ್ತಿಯಿಲ್ಲ. ಅದೇ ರೀತಿ ಅಮೆರಿಕದಿಂದಲೂ ನಾವು ಇದನ್ನೇ ನಿರೀಕ್ಷಿಸುತ್ತೇವೆ’’ ಎಂದು ಫ್ರಾನ್ಸ್‌ನ ವಿದೇಶ ವ್ಯವಹಾರಗಳ ಸಚಿವ ಜೀನ್ ಯವೆಸ್ ಲಿ ಡ್ರಿಯಾನ್ ‘ಎಲ್‌ಸಿಐ ಟೆಲಿವಿಶನ್’ಗೆ ಹೇಳಿದರು.

‘ನಮಗೆ ಟ್ರಂಪ್ ಬೇಕು’ ಎಂದು ಫ್ರಾನ್ಸ್ ಜನ ಹೇಳುತ್ತಿದ್ದಾರೆ: ಟ್ರಂಪ್

‘‘ಪ್ಯಾರಿಸ್ ಒಪ್ಪಂದ ಪ್ಯಾರಿಸ್‌ಗೆ ಪೂರಕವಾಗಿಲ್ಲ. ಫ್ರಾನ್ಸ್‌ನಾದ್ಯಂತ ಪ್ರತಿಭಟನೆಗಳು ಮತ್ತು ಗಲಭೆಗಳು’’ ಎಂಬುದಾಗಿ ಒಂದು ಟ್ವೀಟ್‌ ನಲ್ಲಿ ಟ್ರಂಪ್ ಹೇಳಿದ್ದರು.

‘‘ಪರಿಸರವನ್ನು ರಕ್ಷಿಸಲು ಜನರು ದೊಡ್ಡ ಮೊತ್ತದ ಹಣ ನೀಡಲು ತಯಾರಿಲ್ಲ. ಅದರಲ್ಲಿ ಹೆಚ್ಚಿನ ಪಾಲು ತೃತೀಯ ಜಗತ್ತಿನ ದೇಶಗಳಿಗೆ ಹೋಗುತ್ತದೆ. ಅವರು ‘ನಮಗೆ ಟ್ರಂಪ್ ಬೇಕು’ ಎಂಬುದಾಗಿ ಘೋಷಣೆ ಕೂಗುತ್ತಿದ್ದಾರೆ. ನಾನು ಫ್ರಾನ್ಸನ್ನು ಪ್ರೀತಿಸುತ್ತೇನೆ’’ ಎಂಬುದಾಗಿ ಅವರು ಇನ್ನೊಂದು ಟ್ವೀಟ್‌ ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News