ಹುವಾವೆ ಸಿಎಫ್‌ಒ ಬಿಡುಗಡೆ ಮಾಡಿ; ಇಲ್ಲದಿದ್ದರೆ ತೀವ್ರ ಪರಿಣಾಮ: ಕೆನಡಕ್ಕೆ ಚೀನಾ ಎಚ್ಚರಿಕೆ

Update: 2018-12-09 16:11 GMT

ಬೀಜಿಂಗ್, ಡಿ. 9: ಹುವಾವೆ ಟೆಕ್ನಾಲಜೀಸ್ ಕೊ. ಲಿಮಿಟೆಡ್‌ನ ಜಾಗತಿಕ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮೆಂಗ್ ವಾನ್‌ ಝೂರನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚೀನಾ ಕೆನಡಕ್ಕೆ ಶನಿವಾರ ಎಚ್ಚರಿಕೆ ನೀಡಿದೆ.

ಚೀನಾದ ಬಹುರಾಷ್ಟ್ರೀಯ ಸಂಸ್ಥೆ ಹುವಾವೆಯ ಸ್ಥಾಪಕರ ಮಗಳಾಗಿರುವ ಮೆಂಗ್‌ರನ್ನು ಕೆನಡದಲ್ಲಿ ಡಿಸೆಂಬರ್ 1ರಂದು ಬಂಧಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ. ಅಲ್ಲಿಂದ ಅಮೆರಿಕಕ್ಕೆ ಗಡಿಪಾರಾಗುವ ಬೆದರಿಕೆಯನ್ನು ಅವರು ಎದುರಿಸುತ್ತಿದ್ದಾರೆ.

ಆರ್ಥಿಕ ದಿಗ್ಬಂಧನಗಳ ಹೊರತಾಗಿಯೂ ಇರಾನ್‌ ಗೆ ಪರಿಕರಗಳನ್ನು ಪೂರೈಸಲು ಯತ್ನಿಸಿದ ಕಂಪೆನಿಯೊಂದಿಗೆ ತನ್ನ ಕಂಪೆನಿ ಹೊಂದಿದ್ದ ನಂಟನ್ನು ಮೆಂಗ್ ಮುಚ್ಚಿ ಹಾಕಿದ್ದಾರೆ ಎಂಬುದಾಗಿ ಅಮೆರಿಕ ಆರೋಪಿಸಿದೆ.

ಅವರು ಅಮೆರಿಕಕ್ಕೆ ಗಡಿಪಾರಾದರೆ ಹಲವಾರು ಹಣಕಾಸು ಸಂಸ್ಥೆಗಳಿಗೆ ವಂಚನೆ ಮಾಡಿದ ಪಿತೂರಿಯ ಆರೋಪವನ್ನು ಎದುರಿಸುತ್ತಾರೆ. ಪ್ರತಿಯೊಂದು ಸಂಸ್ಥೆಗೆ ವಂಚನೆ ಮಾಡಿದ ಪ್ರಕರಣದಲ್ಲಿ ಅವರು ಗರಿಷ್ಠ 30 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News