ಟ್ರಂಪ್ ಅಪರಾಧ ಮಾಡಿದ್ದಾರೆ: ಒಪ್ಪಿಕೊಂಡ ಪ್ರಾಸಿಕ್ಯೂಶನ್

Update: 2018-12-09 16:18 GMT

ವಾಶಿಂಗ್ಟನ್, ಡಿ. 9: ಇಬ್ಬರು ಮಹಿಳೆಯರ ಬಾಯಿ ಮುಚ್ಚಿಸಲು ಅವರಿಗೆ ಅಕ್ರಮವಾಗಿ ಹಣ ನೀಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದರು ಎಂದು ಅಮೆರಿಕದ ಕಾನೂನು ಇಲಾಖೆ ಹೇಳಿದೆ. ತಮಗೆ ಟ್ರಂಪ್ ಜೊತೆಗೆ ವಿವಾಹಬಾಹಿರ ಸಂಬಂಧವಿದೆ ಎಂಬ ಅವರ ಹೇಳಿಕೆಗಳು ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಟ್ರಂಪ್ ಮೇಲೆ ದುಷ್ಪರಿಣಾಮ ಬೀರಿದ್ದವು.

ಪ್ರಾಸಿಕ್ಯೂಟರ್‌ಗಳು ಅಪರಾಧವೊಂದಕ್ಕೆ ಟ್ರಂಪ್ ಜೊತೆ ನಂಟು ಕಲ್ಪಿಸುತ್ತಿರುವುದು ಇದೇ ಮೊದಲು.

2016ರ ಚುನಾವಣಾ ಪ್ರಚಾರದ ಉತ್ತುಂಗದ ವೇಳೆ, ಟ್ರಂಪ್‌ರ ಮಾಜಿ ವಕೀಲ ಮೈಕಲ್ ಕೋಹನ್ ಟ್ರಂಪ್ ನಿರ್ದೇಶನದಂತೆ ಆ ಮಹಿಳೆಯರಿಗೆ ರಹಸ್ಯವಾಗಿ ಹಣ ಪಾವತಿಸಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯೊಂದರಲ್ಲಿ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಬಾಯಿ ಮುಚ್ಚಿಸಲು ಮಹಿಳೆಯರಿಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ಶಾಮೀಲಾಗಿದ್ದರು ಎಂದು ಕೋಹನ್ ಈಗಾಗಲೇ ಹೇಳಿದ್ದಾರೆ. ಆದರೆ, ಕೋಹನ್‌ರ ಶಿಕ್ಷೆ ಘೋಷಣೆಗೂ ಮುನ್ನ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳು, ಕೋಹನ್‌ರ ಹೇಳಿಕೆಯನ್ನು ಪ್ರಾಸಿಕ್ಯೂಟರ್‌ಗಳು ನಂಬಿದ್ದಾರೆ ಎನ್ನುವುದನ್ನು ಸೂಚಿಸಿವೆ.

ನ್ಯಾಯಾಲಯದಲ್ಲಿ ಘೋಷಣೆ ಸಲ್ಲಿಸುವ ಮೂಲಕ, ಟ್ರಂಪ್ ಅಪರಾಧ ಮಾಡಿದ್ದಾರೆ ಎನ್ನವುದನ್ನು ಪ್ರಾಸಿಕ್ಯೂಟರ್‌ಗಳು ಬಹುತೇಕ ಒಪ್ಪಿಕೊಂಡಂತಾಗಿದೆ. ಆದರೆ, ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರ ವಿರುದ್ಧ ವಿಚಾರಣೆ ನಡೆಸಬಹುದೇ ಎನ್ನುವ ಬಗ್ಗೆ ಕಾನೂನಿನಲ್ಲಿ ದ್ವಂದ್ವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News