ಚಹಾ ಬೆಳೆಗಾರರಿಗೆ ನೀಡಿದ ಭರವಸೆ ಮರೆತ ‘ಚಾಯ್‌ವಾಲಾ ಪ್ರಧಾನಿ’

Update: 2018-12-09 17:19 GMT

ಹೊಸದಿಲ್ಲಿ, ಡಿ.9: ಚಾಯ್‌ವಾಲಾ ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಈಶಾನ್ಯ ರಾಜ್ಯದ ಚಹಾ ಬೆಳೆಗಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಬಿಜೆಪಿ ಆಡಳಿತವಿರುವ ಅಸ್ಸಾಂನ ಅತೀ ದೊಡ್ಡ ಚಹಾ ತೋಟ ಕಾರ್ಮಿಕರ ಸಂಘವಾಗಿರುವ ಎಸಿಎಂಎಸ್ ಟೀಕಿಸಿದೆ.

ತನ್ನನ್ನು ಪದೇ ಪದೇ ‘ಚಾಯ್‌ವಾಲಾ ಪ್ರಧಾನಿ’ ಎಂದು ಬಣ್ಣಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಚಹಾ ಬೆಳೆಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಸ್ಸಾಂ ಚಹಾ ಮಝ್ದೂರ್ ಸಂಘ(ಎಸಿಎಂಎಸ್)ನ ಪ್ರಧಾನ ಕಾರ್ಯದರ್ಶಿ ರೂಪೇಶ್ ಗೋವಲ ಆರೋಪಿಸಿದ್ದಾರೆ. ರಾಜ್ಯದ ಚಹಾ ತೋಟಗಳಲ್ಲಿ ಒಂದು ಮಿಲಿಯ ಉದ್ಯೋಗ ಸೃಷ್ಟಿಸುವುದಾಗಿ ನಾಲ್ಕು ವರ್ಷದ ಹಿಂದೆ ನೀಡಿರುವ ಭರವಸೆಯನ್ನು ಮೋದಿ ಮರೆತೇ ಬಿಟ್ಟಿದ್ದಾರೆ. 2014ರ ಲೋಕಸಭಾ ಚುನಾವಣೆಗೂ ಮುನ್ನ ಅಸ್ಸಾಂನಲ್ಲಿ ಹಲವಾರು ಚುನಾವಣಾ ರ್ಯಾಲಿ ನಡೆಸಿದ್ದ ಮೋದಿ, ಚಹಾತೋಟದ ಕಾರ್ಮಿಕರಿಗೆ ದಿನವೊಂದಕ್ಕೆ 350 ರೂ. ಕನಿಷ್ಟ ವೇತನ ನಿಯಮ ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ ಇದು ಕೂಡಾ ಭರವಸೆಯಾಗಿಯೇ ಉಳಿದಿದೆ ಎಂದವರು ಹೇಳಿದ್ದಾರೆ.

ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಲ್ಲಿರುವ ಚಹಾ ತೋಟದ ಕಾರ್ಮಿಕರಿಗೆ ಈಗ ದಿನಕ್ಕೆ 167 ರೂ. ಕೂಲಿ, ಬರಾಕ್ ಕಣಿವೆಯ ಚಹಾ ತೋಟದ ಕಾರ್ಮಿಕರಿಗೆ ದಿನಕ್ಕೆ 145 ರೂ. ದೊರೆಯುತ್ತಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವೇತನ ಒಪ್ಪಂದ 2017ರ ಡಿಸೆಂಬರ್ 31ಕ್ಕೆ ಅಂತ್ಯಗೊಂಡಿದೆ. ಬಳಿಕ ಮಧ್ಯಂತರ ಹೆಚ್ಚಳವಾಗಿ ಪ್ರತೀ ದಿನ 30 ರೂ.ಯಂತೆ ವೇತನ ಹೆಚ್ಚಿಸುವುದಾಗಿ ಸರಕಾರ ಘೋಷಿಸಿದೆ.ಅದರಂತೆ 2018ರ ಜನವರಿ 1ರಿಂದ ಚಹಾತೋಟದ ಕಾರ್ಮಿಕರು ಮಧ್ಯಂತರ ಹೆಚ್ಚಳ ಪಡೆಯಬೇಕು. ಆದರೆ ಈಗ ಸರಕಾರ 2018ರ ಮಾರ್ಚ್ ನಿಂದ ಕೂಲಿ ಹೆಚ್ಚಳ ಅನ್ವಯಿಸುತ್ತದೆ ಎಂದು ಹೇಳುತ್ತಿದೆ. ಇದರಿಂದ ದಿನಕ್ಕೆ 30 ರೂ.ಯಂತೆ ಸುಮಾರು 2 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ರೂಪೇಶ್ ಗೋವಲ ಹೇಳಿದ್ದಾರೆ. ರಾಜ್ಯದ ಬಿಜೆಪಿ ನೇತೃತ್ವದ ಸರಕಾರ ಇನ್ನೂ ಕನಿಷ್ಟ ಸಂಬಳ ನಿಗದಿಗೊಳಿಸಿಲ್ಲ . 2019ರ ಆರಂಭದ ಮೊದಲು ಕನಿಷ್ಟ ಸಂಬಳವಾದ 350 ರೂ. ನಿಗದಿಗೊಳಿಸುವಂತೆ ಅವರು ಆಗ್ರಹಿಸಿದರು. ಕಂಪೆನಿ ಒಡೆತನದ ಚಹಾ ತೋಟದ ಕಾರ್ಮಿಕರಿಗೆ ದಿನಕ್ಕೆ 167 ರೂ. ಸಂಬಳ ಸಿಗುತ್ತಿದೆ. ಆದರೆ ಸರಕಾರಿ ಒಡೆತನದ ಅಸ್ಸಾಂ ಟೀ ಕಂಪೆನಿಯ 14 ತೋಟಗಳ ಕಾರ್ಮಿಕರಿಗೆ ದಿನಕ್ಕೆ ಕೇವಲ 115 ರೂ. ಸಂಬಳ ಸಿಗುತ್ತಿದೆ. ದೇಶದ ಒಟ್ಟು ಚಹಾ ಉತ್ಪಾದನೆಯ ಶೇ.50ರಷ್ಟನ್ನು ಉತ್ಪಾದಿಸುವ ಅಸ್ಸಾಂನ ಚಹಾ ತೋಟದ ಕಾರ್ಮಿಕರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News