ಶರೀಅತ್ ಸಂರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ: ಸಚಿವ ಯು.ಟಿ.ಖಾದರ್

Update: 2018-12-09 17:52 GMT

'ನೂರು ಪ್ರಧಾನಿಗಳು ಬಂದರೂ ಕೂಡಾ ಶರೀಅತ್‌ಗೆ ಯಾವ ತೊಂದರೆಯಾಗದು'

ಮಂಗಳೂರು, ಡಿ.9: ಶರೀಅತ್ ಸಂರಕ್ಷಣೆಗೆ ಸರ್ವ ಮುಸ್ಲಿಮರು ಕಟಿಬದ್ಧರಾಗಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಇರುವವರೆಗೆ ಒಬ್ಬ ಅಲ್ಲ ಇಂತಹ ನೂರು ಪ್ರಧಾನಿಗಳು ಬಂದರೂ ಕೂಡಾ ಶರೀಅತ್‌ಗೆ ಯಾವ ತೊಂದರೆಯಾಗದು. ಅಂತಹ ಸಂದರ್ಭ ಎದುರಾದರೆ ತನ್ನ ಅಧಿಕಾರದ ಸ್ಥಾನಕ್ಕೆ ರಾಜೀನಾಮೆ ಮಾತ್ರವಲ್ಲ, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿಯ ವತಿಯಿಂದ ‘ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಕೈ ಜೋಡಿಸೋಣ: ಧಾರ್ಮಿಕತೆಯನ್ನು ಧ್ವಂಸ ಮಾಡುವ ಮೆಟೀರಿಯಲಿಸಂ ಸಿದ್ಧಾಂತವನ್ನು ಹಿಮ್ಮೆಟ್ಟಿಸೋಣ’ ಎಂಬ ಘೋಷಣೆಯೊಂದಿಗೆ ನಗರದ ನೆಹರೂ ಮೈದಾನಿನ ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ವೇದಿಕೆಯಲ್ಲಿ ರವಿವಾರ ನಡೆದ ‘ಶರೀಅತ್ ಸಂರಕ್ಷಣಾ ಸಮ್ಮೇಳನ’ ಸಚಿವ ಖಾದರ್ ಅವರು ಮಾತನಾಡಿದರು.

ಸ್ವಾಗತಿಸಿ ಪ್ರಸ್ತಾವನೆಗೈದ ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಭಾರತದಲ್ಲಿ ಎಲ್ಲಾ ಧರ್ಮೀಯರಿಗೂ ಅವರವರ ಧರ್ಮದ ಪ್ರಕಾರ ಬದುಕು ನಡೆಸುವ ಹಕ್ಕುಗಳನ್ನು ಸಂವಿಧಾನ ನೀಡಿದೆ. ಆದರೆ ಇತ್ತೀಚೆಗೆ ಸಂವಿಧಾನವನ್ನೇ ಬುಡಮೇಲು ಮಾಡಿ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತದೆ. ಧರ್ಮ, ಸಂವಿಧಾನ, ಸಂಸ್ಕಾರ ಉಳಿಸಿ ಎಂಬುದು ನಮ್ಮ ಆಗ್ರಹವಾಗಿದೆ. ಶರೀಅತ್‌ಗೆ ದಕ್ಕೆಯಾದರೆ ಸಮುದಾಯದ ರಾಜಕಾರಣಿಗಳು ಅಧಿಕಾರ ತ್ಯಾಗಕ್ಕೂ ಸಿದ್ಧರಾಗಬೇಕು ಎಂದರು.

ದ.ಕ.ಜಿಲ್ಲಾ ಖಾಝಿಯಾಗಿದ್ದ ಶಹೀದ್ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಅವರ ಆತ್ಮಚರಿತ್ರೆ ‘ನನ್ನ ಮತ್ತು ವಿದ್ಯಾಭ್ಯಾಸದ ಕಥೆ’ ಎಂಬ ಕೃತಿಯನ್ನು ಯೆನೆಪೊಯ ವಿವಿ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಬಿಡುಗಡೆಗೊಳಿಸಿದರು. ಕೃತಿಯ ಪ್ರಥಮ ಪ್ರತಿಯನ್ನು ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರ ಪುತ್ರ ಸಿ.ಎಂ.ಶಾಫಿ ಸ್ವೀಕರಿಸಿದರು.

ಸಮ್ಮೇಳನಕ್ಕೆ ಮೊದಲು ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಆಕರ್ಷಕ ರ್ಯಾಲಿ ನಡೆಯಿತು. ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ರ್ಯಾಲಿಗೆ ಚಾಲನೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News