ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛತಾ ಅಭಿಯಾನ: 5ನೇ ಹಂತದ ಶ್ರಮದಾನ

Update: 2018-12-09 17:32 GMT

ಮಂಗಳೂರು, ಡಿ.9: ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛತಾ ಅಭಿಯಾನದ ಅಂಗವಾಗಿ 5ನೇ ಹಂತದ ಸ್ವಚ್ಛ ಮಂಗಳೂರು ಪ್ರಥಮ ಶ್ರಮದಾನಕ್ಕೆ ರವಿವಾರ ಬೆಳಗ್ಗೆ ಮಾರ್ನಮಿಕಟ್ಟೆ-ನಂದಿಗುಡ್ಡೆಯಲ್ಲಿ ಚಾಲನೆ ನೀಡಲಾಯಿತು.

ದ.ಕ. ಜಿಪಂ ಸ್ವಚ್ಛ ಭಾರತ ಮಿಷನ್ ಸಂಯೋಜಕಿ ಮಂಜುಳಾ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ ಕಾರ್ಣಿಕ್ ಜಂಟಿಯಾಗಿ ಪ್ರಥಮ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಶುಭಾರಂಭಗೊಳಿಸಿದರು.

ಅಭಿಯಾನದ ಪ್ರಧಾನ ಸಂಯೋಜಕ ದಿಲ್‌ರಾಜ್ ಆಳ್ವ ನೇತೃತ್ವದಲ್ಲಿ ಕಾರ್ಯಕರ್ತರು ಆರು ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾ ಕಾರ್ಯ ನಡೆಸಿ ದರು. ನಂದಿಗುಡ್ಡೆ ಹಾಗೂ ಮಾರ್ನಮಿಕಟ್ಟೆಯ ನಡುವಿನ ರಸ್ತೆಯ ಅಕ್ಕಪಕ್ಕಗಳಲ್ಲಿ ಕಲ್ಲು-ಮಣ್ಣುಗಳ ಅನೇಕ ರಾಶಿಗಳು ಬಿದ್ದುಕೊಂಡಿದ್ದವು. ಅವುಗಳನ್ನು ಜೆಸಿಬಿ ಹಾಗೂ ಟಿಪ್ಪರ್‌ಗಳನ್ನು ಬಳಸಿಕೊಂಡು ತೆರವುಗೊಳಿಸಲಾಯಿತು.

ನಿಟ್ಟೆ ಫಿಸಿಯೋಥೆರಫಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಂಶುಪಾಲ ಡಾ.ಧನೇಶ್‌ಕುಮಾರ್, ವಿಠಲದಾಸ ಪ್ರಭು ಹಾಗೂ ಕೋಡಂಗೆ ಬಾಲಕೃಷ್ಣ ನಾಕ್ ಮಾರ್ಗದರ್ಶನದಂತೆ ನಂದಿಗುಡ್ಡೆ ಪರಿಸರದಲ್ಲಿ ಶ್ರಮದಾನ ಮಾಡಲಾಯಿತು. ಮಾರ್ನಮಿಕಟ್ಟೆ ರಸ್ತೆಯ ಬದಿಯಲ್ಲಿ ಕಳೆ ಕೊಚ್ಚುವ ಯಂತ್ರದ ಸಹಾಯ ದಿಂದ ಹುಲ್ಲನ್ನು ತೆಗೆದು ಹಸನುಗೊಳಿಸಲಾಯಿತು.

ನಂದಿಗುಡ್ಡೆಯಲ್ಲಿರುವ ಮೈದಾನಕ್ಕೆ ಸಾಗುವ ದಾರಿಯಲ್ಲಿದ್ದ ಪ್ಲಾಸ್ಟಿಕ್ ಪೇಪರ್ ಹಾಗೂ ಮಣ್ಣಿನಿಂದ ಆವೃತವಾಗಿದ್ದ ಮೆಟ್ಟಿಲುಗಳನ್ನು ದೀಕ್ಷಿತ್, ದೀಪಿಕಾ ಆಳ್ವ, ಸುಮಾ ಕೋಡಿಕಲ್ ಇನ್ನಿತರರು ಶುಚಿಗೊಳಿಸಿದರು. ನಂದಿಗುಡ್ಡೆ ವೃತ್ತದ ಬಳಿಯ ತೋಡುಗಳಲ್ಲಿದ್ದ ಕಸವನ್ನು ನಿವೇದಿತಾ ಬಳಗದ ಸದಸ್ಯರು ತೆಗೆದು ಸ್ವಚ್ಛ ಮಾಡಿದರು.

ತಂಗುದಾಣಗಳ ಸ್ವಚ್ಛತೆ:  ಮೊದಲಿಗೆ ನಂದಿಗುಡ್ಡೆ ಹಾಗೂ ಜೆಪ್ಪುವಿನಲ್ಲಿರುವ ಎರಡು ತಂಗುದಾಣಗಳ ಸುತ್ತಮುತ್ತ ಕಸಗುಡಿಸಿ ಸ್ವಚ್ಛಗೊಳಿಸಲಾಯಿತು. ತದನಂತರ ಬಲೆ ತೆಗೆದು ಶುಚಿಗೊಳಿಸಿ, ನೀರಿನಿಂದ ತೊಳೆಯಲಾಯಿತು. ಬಳಿಕ ಬಣ್ಣ ಹಚ್ಚಿ ತಂಗುದಾಣಗಳು ಕಂಗೊಳಿಸುವಂತೆ ಮಾಡಲಾಯಿತು. ಸುಧೀರ್ ನರೋಹ್ನಾ, ಅವಿನಾಶ್ ಅಂಚನ್ ಹಾಗೂ ವಿಖ್ಯಾತ್ ಮತ್ತಿತರ ಕಾರ್ಯಕರ್ತರು ತಂಗುದಾಣಗಳ ಸ್ವಚ್ಛತಾ ಕಾರ್ಯ ಕೈಗೊಂಡರು.

ಬ್ಯಾನರ್-ಪೋಸ್ಟರ್ ತೆರವು: ಮಂಗಳೂರಿನ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಪೋಸ್ಟರ್-ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ಉದಯ್ ಕೆ.ಪಿ., ಯೋಗಿಶ್ ಕಾಯರ್ತಡ್ಕ ಹಾಗೂ ಕಾರ್ಯಕರ್ತರು ನಗರದ ಅಲ್ಲಲ್ಲಿ ಹಾಕಲಾಗಿದ್ದ ಸುಮಾರು 200ಕ್ಕೂ ಅಧಿಕ ಅನಧಿಕೃತ ಬ್ಯಾನರ್‌ಗಳನ್ನು ತೆಗೆದು ಹಾಕಿದರು. ಅನಧಿಕೃತ ಬ್ಯಾನರ್ ಅಳವಡಿಸುವವರಿಗೆ ಕರೆ ಮಾಡಿ ಎಲ್ಲೆಂದರಲ್ಲಿ ಹಾಕದಂತೆ ವಿನಂತಿಸಲಾಯಿತು.

ಸ್ವಾಮಿ ಏಕಗಮ್ಯಾನಂದ, ಡಾ.ರಾಜೇಂದ್ರಪ್ರಸಾದ್, ಕಾರ್ಪೊರೇಶನ್ ಬ್ಯಾಂಕ್ ಡಿಜಿಎಂ ರವಿಶಂಕರ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ.ವಿ., ಸುಜಿತ್ ಭಂಡಾರಿ, ಮೋಹನ್ ಕೊಟ್ಟಾರಿ, ಮುಹಮ್ಮದ್ ಶಮೀಮ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News