ಜಾತಿ ವಿರೋಧಿ ಹೋರಾಟಗಾರ್ತಿ ಕೌಸಲ್ಯ ಮರುವಿವಾಹ

Update: 2018-12-09 17:46 GMT

ಕೊಯಂಬತ್ತೂರು,ಡಿ.9: ಜಾತಿ ಸಂಬಂಧಿತ ಹತ್ಯೆಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಖ್ಯಾತರಾದ ಸಾಮಾಜಿಕ ಹೋರಾಟಗಾರ್ತಿ ಗೌಸಲ್ಯ ರವಿವಾರ ಪರೈ (ಒಂದು ರೀತಿಯ ಡೋಲು) ಕಲಾವಿದ ಶಕ್ತಿಯವರನ್ನು ಕೊಯಂಬತ್ತೂರಿನ ಗಾಂಧಿಪುರಂನಲ್ಲಿರುವ ತಂತೈ ಪೆರಿಯಾರ್ ದ್ರಾವಿಡರ್ ಕಾಳಗಂನ ಮುಖ್ಯ ಕಚೇರಿಯಲ್ಲಿ ಮರುವಿವಾಹವಾದರು ಎಂದು ವರದಿ ಯಾಗಿದೆ. ತಂತೈ ಪೆರಿಯಾರ್ ದ್ರಾವಿಡರ್ ಕಳಗಂನ ಪ್ರಧಾನ ಕಾರ್ಯದರ್ಶಿ ಕೆ.ರಾಮಕೃಷ್ಣನ್, ದ್ರಾವಿಡರ್ ವಿಡುತಲೈ ಕಾಳಗಂನ ಸಂಸ್ಥಾಪಕ ಕೊಲತ್ತೂರು ಮಣಿ, ವಿಡುತಲೈ ಚಿರುತೈಗಳ್ ಕಚ್ಚಿಯ ಸಹಾಯಕ ಪ್ರಧಾನ ಕಾರ್ಯದರ್ಶಿ ವನ್ನಿಯರಸು ಮತ್ತು ಹೋರಾಟಗಾರ ಎವಿಡೆನ್ಸ್ ಕದಿರ್ ಹಾಗೂ ಇತರರು ಈ ವಿವಾಹಕ್ಕೆ ಸಾಕ್ಷಿಯಾದರು. 2016ರಲ್ಲಿ ಗೌಸಲ್ಯ ಅವರ ಮೊದಲ ಪತಿ ದಲಿತರಾಗಿದ್ದ ಶಂಕರ್ ಅವರನ್ನು ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ 19ರ ಹರೆಯದವರಾಗಿದ್ದ ಗೌಸಲ್ಯ ವಿವಾಹವಾಗಿ ಕೇವಲ ಎಂಟು ತಿಂಗಳಷ್ಟೇ ಕಳೆದಿತ್ತು. ಅಂದಿನಿಂದ ಗೌಸಲ್ಯ ಜಾತಿಯ ಹೆಸರಲ್ಲಿ ನಡೆಯುವ ಮರ್ಯಾದಾ ಹತ್ಯೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

2017ರ ಡಿಸೆಂಬರ್‌ನಲ್ಲಿ ತಮಿಳುನಾಡಿನ ತಿರುಪುರ್ ನ್ಯಾಯಾಲಯ ಗೌಸಲ್ಯರ ತಂದೆ ಮತ್ತು ಇತರ ಐದು ಮಂದಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಪ್ರಕರಣದ ಆರೋಪಿಗಳಾಗಿದ್ದ ಗೌಸಲ್ಯರ ತಾಯಿ ಮತ್ತು ಚಿಕ್ಕಪ್ಪನನ್ನು ನ್ಯಾಯಾಲಯ ಬಿಡುಗಡೆಗೊಳಿಸಿತ್ತು.

ಜಾತಿ ಹತ್ಯೆಗಳ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ನೂತನ ದಂಪತಿ ಪ್ರತಿಜ್ಞೆ ಮಾಡಿದ್ದು ಜನರ ಒಳಿತಿಗಾಗಿ ಶ್ರಮಿಸುವ ಪೆರಿಯಾರ್‌ವಾದಿಗಳು, ಅಂಬೇಡ್ಕರ್‌ವಾದಿಗಳು ಮತ್ತು ಮಾರ್ಕ್ಸ್‌ವಾದಿಗಳು ಯಾವತ್ತು ಬೇಕಾದರೂ ನಮ್ಮ ಮನೆಗೆ ಆಗಮಿಸಬಹುದು ಎಂದು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News