ಮಲ್ಯ ಗಡಿಪಾರಿಗೆ ಬ್ರಿಟನ್ ನ್ಯಾಯಾಲಯದ ಆದೇಶ

Update: 2018-12-10 15:55 GMT

ಹೊಸದಿಲ್ಲಿ, ಡಿ.10: ಬಹುಕೋಟಿ ರೂ.ಬ್ಯಾಂಕ್ ವಂಚನೆ ಹಾಗೂ ಕಪ್ಪು ಹಣ ಬಿಳುಪು ಆರೋಪಗಳನ್ನು ಎದುರಿಸುತ್ತಿರುವ ದೇಶಭ್ರಷ್ಟ, ಸಾಲ ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಬ್ಯಾಂಕ್ ವಂಚನೆ, ಸಂಚು ಹಾಗೂ ಕಪ್ಪುಹಣ ಬಿಳುಪು ಪ್ರಕರಣಗಳಲ್ಲಿ ಮಲ್ಯ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಗಡಿಪಾರುಗೊಳಿಸುವಂತೆ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶೆ ಎಮ್ಮಾ ಅಬುತ್ನೋಟ್ ಆದೇಶಿಸಿದ್ದಾರೆ.

ಭಾರತೀಯ ಸ್ಟೇಟ್‌ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಸಾಲ ಮರು ಪಾವತಿಸದೆ, ಭಾರತದಿಂದ ಪರಾರಿಯಾದ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಭಾರತ ಸರಕಾರ ಬ್ರಿಟನ್‌ಗೆ ಮನವಿ ಸಲ್ಲಿಸಿತ್ತು.

ವಿಜಯ್ ಮಲ್ಯ ಅವರ ಸಾಲವನ್ನು ಮರುವಸೂಲಿ ಮಾಡಲು ವಿವಿಧ ಬ್ಯಾಂಕ್‌ಗಳು ಅವರ ವಿರುದ್ಧ ಕಾನೂನು ಕ್ರಮವನ್ನು ಆರಂಭಿಸಿದ್ದವು. ಭಾರತದಿಂದ ಪರಾರಿಯಾದ ಬಳಿಕ ಮಲ್ಯ ಅವರು ಬ್ರಿಟನ್‌ನಲ್ಲಿರುವ ತನ್ನ ವಿಲಾಸಿ ಬಂಗಲೆಯಲ್ಲಿ ವಾಸವಾಗಿದ್ದರು.

ವೆಸ್ಟ್‌ಮಿನಿಸ್ಟರ್ ನ್ಯಾಯಾಲಯವು ಹೊರಡಿಸಿರುವ ಗಡಿಪಾರು ಆದೇಶವನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮಲ್ಯ 14 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ಅವರು ಮೇಲ್ಮನವಿ ಸಲ್ಲಿಸದೆ ಇದ್ದಲ್ಲಿ 28 ದಿನಗಳಲ್ಲಿ ಅವರನ್ನು ಗಡಿಪಾರು ಮಾಡಬಹುದಾಗಿದೆ.

ಕಳೆದ ವರ್ಷ ಭಾರತ ಸರಕಾರವು ಮಲ್ಯ ಗಡಿಪಾರಿಗೆ ವಾರಂಟ್ ಹೊರಡಿಸಿದಾಗಿನಿಂದ ಅವರು ಜಾಮೀನಿನಲ್ಲಿದ್ದರು.

ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚನೆ ಹಾಗೂ ಕಪ್ಪುಹಣ ಬಿಳುಪು ಆರೋಪಗಳಿಗೆ ಸಂಬಂಧಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ಮಲ್ಯ ವಿರುದ್ಧ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು.

ವಿಜಯ್‌ ಮಲ್ಯ ಅವರನ್ನು ಗಡಿಪಾರುಗೊಳಿಸುವ ತನ್ನ ಆದೇಶವನ್ನು, ನ್ಯಾಯಾಲಯವು ಬ್ರಿಟನ್ ಸರಕಾರದ ವಿದೇಶಾಂಗ ಕಾರ್ಯದರ್ಶಿಯವರಿಗೆ ಪ್ರಸ್ತಾವಿಸಿದೆ.

ಭಾರತಕ್ಕೆ ತನ್ನ ಗಡಿಪಾರನ್ನು ವಿಜಯ್ ಮಲ್ಯ ತೀವ್ರವಾಗಿ ವಿರೋಧಿಸಿದ್ದರು. ಭಾರತೀಯ ಜೈಲುಗಳಲ್ಲಿ ಸಮರ್ಪಕವಾದ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲವೆಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯದ ಕೋರಿಕೆಯಂತೆ, ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿದಲ್ಲಿ ಅವರನ್ನು ಇರಿಸಲಾಗುವ ಮುಂಬೈನ ಅರ್ಥರ್‌ರೋಡ್ ಜೈಲ್‌ನ 12ನೇ ರ‍್ಯಾಂಕ್ನ ವಿಡಿಯೋವನ್ನು ಭಾರತವು ನ್ಯಾಯಾಧೀಶೆ ಎಮ್ಮಾ ಅರ್ಬುತ್ನೊಟ್ ಅವರಿಗೆ ಸಲ್ಲಿಸಿತ್ತು.

ಮಲ್ಯ ಇತ್ತೀಚೆಗೆ ಸ ರಣಿ ಟ್ವೀಟ್‌ಗಳನ್ನು ಪ್ರಸಾರ ಮಾಡಿ ಸಾಲ ಮರುಪಾವತಿಸುವ ಕೊಡುಗೆ ನೀಡಿದ್ದರು. ‘‘ನನ್ನಲ್ಲಿರುವ ಹಣವನ್ನು ದಯ ವಿಟ್ಟು ತೆಗೆದುಕೊಳ್ಳಬೇಕೆಂದು ನಾನು ಹೋದಲ್ಲೆಲ್ಲಾ ಹೇಳುತ್ತಲೇ ಬಂದಿದ್ದೇನೆ. ನಾನು ಹಣ ಕದ್ದಿದ್ದೇನೆಂಬ ಅಪವಾದವನ್ನು ತೊಡೆದುಹಾಕಲು ಬಯಸಿದ್ದೇನೆ’’ ಎಂದು ಅವರು ಕಳೆದ ವಾರ ಟ್ವೀಟ್ ಮಾಡಿದ್ದರು. ‘‘ನಾನು ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ. ಕಿಂಗ್‌ಫಿಶರ್ ಏರ್‌ಲೈನ್ಸ್ ನಿಜವಾದ ಸಾಲಗಾರನಾಗಿದೆ. ಔದ್ಯಮಿಕ ವೈಫಲ್ಯದಿಂದಾಗಿ ಹಣವು ಕಳೆದುಹೋಯಿತು. ಒಂದು ಸಾಲಕ್ಕೆ ಖಾತರಿದಾರನಾಗಿರುವುದು ವಂಚನೆಯಾಗುವುದಿಲ್ಲ’’ ಎಂದವರು ಇನ್ನೊಂದು ಟ್ವೀಟ್‌ನಲ್ಲಿ ಅಭಿಪ್ರಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News