ಆದಾಯ ತೆರಿಗೆ ವಿಧಿಸುವ ಮೂಲಕ ಸಹಕಾರ ಸಂಘಗಳ ಅವನತಿಗೆ ಆರ್‌ಬಿಐ ಸಂಚು: ಡಾ.ಎಂ.ಎನ್.ರಾಜೇಂದ್ರ ಕುಮಾರ್

Update: 2018-12-10 13:31 GMT

ಮಂಗಳೂರು, ಡಿ.10: ಕೃಷಿ ಸಾಲಗಳನ್ನು ನೀಡಿ ರೈತರ ಹಿತರಕ್ಷಣೆ ಮಾಡುತ್ತಿರುವ ಸಹಕಾರಿ ಸಂಘಗಳ ಮೇಲೆ ಆದಾಯ ತೆರಿಗೆ ವಿಧಿಸುವ ಮೂಲಕ ಆರ್‌ಬಿಐ ಸಹಕಾರಿ ಕ್ಷೇತ್ರಗಳ ಅವನತಿಗೆ ಸಂಚು ನಡೆಯುತ್ತಿವೆ. ಆರ್‌ಬಿಐ ವಿಧಿಸುವ ಬಹುತೇಕ ನಿಯಮಗಳು ಸಹಕಾರಿ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಸಹಕಾರ ಇಲಾಖೆ ವತಿಯಿಂದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳೂರು ಉಪ ವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೋಮವಾರ ನಡೆದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಘದ ಅಭಿವೃದ್ಧ್ದಿಗೆ ಕಾಯ್ದಿರಿಸಿದ ನಿಧಿಗೆ ಆದಾಯ ತೆರಿಗೆ ವಿಧಿಸುವ ಕ್ರಮ ಸರಿಯಲ್ಲ. ಸರಕಾರದ ಬಡ್ಡಿ ಮನ್ನಾ, ಕೃಷಿ ಸಾಲ ಮನ್ನಾದ ಹೊರೆ ಒಂದೆರಡು ವರ್ಷದ ಕಾಲ ಸಹಕಾರಿ ಸಂಘಗಳ ಮೇಲಿರುತ್ತದೆ. ಆದರೆ ಸರಕಾರ ಯಾವುದೇ ಠೇವಣಿಯನ್ನು ಸಹಕಾರ ಸಂಘದಲ್ಲಿಡುವುದಿಲ್ಲ. ಬ್ಯಾಂಕ್ ನಷ್ಟ ಹೊಂದಿದರೆ ನೆರವಾಗುವ ಸರಕಾರ ನಷ್ಟದಲ್ಲಿರುವ ಸಹಕಾರಿ ಸಂಘಗಳಿಗೆ ನೆರವು ನೀಡುವುದಿಲ್ಲ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ವಿಷಾಧಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಕಾನೂನು ಜಾರಿ ಮಾಡುವುದು ಸರಕಾರದ ಕರ್ತವ್ಯ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಲೆಕ್ಕಪರಿಶೋಧಕ ಬಿ. ಚಂದ್ರಕಾಂತ್ ರಾವ್ ಟಿಡಿಎಸ್, ಜಿಎಸ್‌ಟಿ ಮತ್ತು ಆದಾಯ ತೆರಿಗೆಗೆ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್ ಕುಮಾರ್, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ ಭಾಗವಹಿಸಿದ್ದರು.

ಜಿಲ್ಲಾ ಸಹಕಾರಿ ಯೂನಿಯನ್‌ನ ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ, ನಿರ್ದೇಶಕ ನೀಲಯ್ಯ ಅಗರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ಪುರುಷೋತ್ತಮ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News