ಮಾನವ ಹಕ್ಕುಗಳು ಸ್ವೇಚ್ಛಾರವಲ್ಲ: ದ.ಕ.ಜಿಲ್ಲಾ ಎಸ್ಪಿ ರವಿಕಾಂತೇಗೌಡ

Update: 2018-12-10 13:36 GMT

ಮಂಗಳೂರು, ಡಿ.10: ಮಾನವ ಹಕ್ಕುಗಳನ್ನು ಚಲಾಯಿಸಲು ಮನುಷ್ಯನಿಗೆ ಇತಿಮಿತಿಗಳಿವೆ. ಆ ಮಿತಿಯೊಳಗೆ ಅವುಗಳನ್ನು ಆಚರಿಸಬೇಕಿವೆ. ಮಾನವ ಹಕ್ಕುಗಳು ಎಂದೂ ಕೂಡ ಸ್ವೇಚ್ಛಾರವಲ್ಲ. ಹಾಗಾಗಿ ಹಕ್ಕುಗಳ ಚಲಾವಣೆಯ ವೇಳೆ ಇನ್ನೊಬ್ಬರ ಹಕ್ಕಿನ ಉಲ್ಲಂಘನೆಯು ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಮಾನವ ಹಕ್ಕುಗಳ ಸರಕಾರೇತರ ಸಂಸ್ಥೆಗಳು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಹ್ಯೂಮನ್ ರೈಟ್ಸ್ ಫೆಡರೇಶನ್ ಆ್ ಇಂಡಿಯಾ ಸಹಯೋಗದಲ್ಲಿ ನಗರದ ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಸೆಮಿನಾರ್ ಹಾಲ್‌ನಲ್ಲಿ ಸೋಮವಾರ ನಡೆದ ‘ಮಾನವ ಹಕ್ಕುಗಳ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1948ರಲ್ಲಿ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ದಿನವನ್ನು ಘೋಷಿಸಿದೆ. ಮಾನವ ಘನತೆಯೊಂದಿಗೆ ಬದುಕಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ. ಬಳಿಕ ಭಾರತದ ಸಂವಿಧಾನವೂ ಮಾನವ ಹಕ್ಕುಗಳನ್ನು ಸೇರಿಸಿಕೊಂಡಿದೆ. ಪ್ರಜಾಪ್ರಭುತ್ವ ಭಾರತದಲ್ಲಿ ಮಾನವ ಹಕ್ಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೇಶದಲ್ಲಿ ಶೇ.40ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದು ಕೂಡ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ರವಿಕಾಂತೇಗೌಡ ಹೇಳಿದರು.

ಅಪರ ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಮಾನವ ಹಕ್ಕುಗಳು ಹುಟ್ಟಿನಿಂದಲೇ ಪ್ರಾಪ್ತಿಯಾಗುತ್ತವೆ. ಅವುಗಳ ರಕ್ಷಣೆ ಪ್ರತಿಯೊಬ್ಬನ ಜವಾಬ್ದಾರಿ ಯಾಗಿದೆ. ಎಲ್ಲ ಧರ್ಮ ಗ್ರಂಥಗಳಲ್ಲೂ ಮಾನವ ಹಕ್ಕುಗಳ ರಕ್ಷಣೆಯ ವಿಚಾರಗಳಿವೆ. 12ನೇ ಶತಮಾನದಲ್ಲೇ ‘ದಯೆಯೇ ಧರ್ಮದ ಮೂಲವಯ್ಯಾ’ ಎನ್ನುವ ಮೂಲಕ ಬಸವಣ್ಣ ಸಪ್ತಸೂತ್ರಗಳನ್ನು ನೀಡಿದ್ದಾರೆ. ಜೀವನದಲ್ಲಿ ಮಾನವೀಯ ವೌಲ್ಯಗಳನ್ನು ಬೆಳೆಸಿದರೆ ಮಾತ್ರ ಮಾನವ ಹಕ್ಕುಗಳನ್ನು ಉಳಿಸಿದಂತಾಗುತ್ತದೆ ಎಂದರು.

ಹ್ಯೂಮನ್ ರೈಟ್ಸ್ ಫೆಡರೇಶನ್ ಆ್ ಇಂಡಿಯಾದ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು. ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಅರುಣಾ ಪಿ. ಕಾಮತ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಕವಿತಾ ಪ್ರಭು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News