ಕೆಲಸದೊತ್ತಡ ತಡೆಗೆ ಕ್ರೀಡೆ ಸಹಕಾರಿ : ಪ್ರಕಾಶ್ ನೆಟಾಲ್‌ಕರ್

Update: 2018-12-10 13:45 GMT

ಮಂಗಳೂರು, ಡಿ.10: ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗವು ಜನರ ಮತ್ತು ರಾಜಕಾರಣಿಗಳ ಮಧ್ಯೆ ಬಹಳಷ್ಟು ಒತ್ತಡದಿಂದ ಕೆಲಸ ಮಾಡಬೇಕಾಗುತ್ತದೆ. ಈ ಒತ್ತಡವನ್ನು ನಿವಾರಿಸಲು ದೈಹಿಕ ಮತ್ತು ಮಾನಸಿಕ ಸ್ವಾಸ್ತ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಹಾಗಾಗಿ ಕ್ರೀಡಾ ಚಟುವಟಿಕೆ ಗಳು ದೈಹಿಕ ಮತ್ತು ಮಾನಸಿಕ ನೆಮ್ಮದಿಯನ್ನು ಹಾಗೂ ವಿಶ್ರಾಂತಿಯನ್ನು ಒದಗಿಸಿ ಉತ್ತಮ ಆರೋಗ್ಯ ಕಾಪಾಡಲು ನೆರವಾಗುತ್ತವೆ ಎಂದು ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್‌ಕರ್ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನಿನಲ್ಲಿ ಸೋಮವಾರ ಮಂಗಳೂರು ನಗರ ಮತ್ತು ದ.ಕ. ಜಿಲ್ಲಾ ಪೊಲೀಸರ 2018ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯು ಶಿಸ್ತಿಗೆ ಹೆಸರಾಗಿದೆ. ಕ್ರೀಡಾ ಚಟುವಟಿಕೆ ಕೂಡ ಜೀವನದಲ್ಲಿ ಶಿಸ್ತು ಮೈಗೂಢಿಸಿಕೊಳ್ಳಲು ಪೂರಕವಾಗಿದೆ. ಆದ್ದರಿಂದ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದ ನೆಟಾಲ್‌ಕರ್ ಕ್ರೀಡಾಳುಗಳು ಉತ್ತಮ ಸಾಧನೆ ತೋರಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಹಾರೈಸಿದರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ದ.ಕ.ಜಿಲ್ಲಾ ಎಸ್ಪಿ ಡಾ. ಬಿ.ಆರ್. ರವಿಕಾಂತೇ ಗೌಡ ದ.ಕ. ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಜಿಲ್ಲಾ ಪೊಲೀಸ್ ಮತ್ತು ಕಮಿಷನರೆಟ್‌ಗಳು ಸೇರಿಕೊಂಡು ಜಂಟಿಯಾಗಿ ವಾರ್ಷಿಕ ಕ್ರೀಡಾಕೂಟ ನಡೆಸಲಾಗುತ್ತದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಕ್ರೀಡಾ ಕೂಟ ನಡೆಯುತ್ತದೆ ಎಂದು ಹೇಳಿದರು.

ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ಬಂಟ್ವಾಳ ಎಎಸ್‌ಪಿ ಋಷಿಕೇಶ್ ಸೋನವಾನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿಸಿಪಿ ಹನುಮಂತರಾಯ ವಂದಿಸಿದರು. ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ಎಎಸ್ಸೈ ಹರಿಶ್ಚಂದ್ರ ಆರ್. ಬೈಕಂಪಾಡಿ ಮತ್ತು ಬದ್ರಿಯಾ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮೊದಿನ್ ಕುಂಞಿ ಕಾರ್ಯಕ್ರಮ ನಿರೂಪಿಸಿದರು.

2017ರ ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಗೆದ್ದ ನಗರ ಸಶಸ ಮೀಸಲು ಪಡೆಯ ಸಿದ್ದರಾಮಪ್ಪ ಕ್ರೀಡಾ ಜ್ಯೋತಿಯನ್ನು ಮೈದಾನಿಗೆ ತಂದರು. ಆರ್‌ಎಸ್‌ಐ ರುದ್ರೇಶ್ ಕ್ರೀಡಾಳುಗಳಿಗೆ ಪ್ರತಿಜ್ಞೆ ಬೋಧಿಸಿದರು.

ಪಥ ಸಂಚಲನದ ಕಮಾಂಡಿಂಗ್ ಪ್ರಕ್ರಿಯೆಯನ್ನು ಇದೇ ಮೊದಲ ಬಾರಿ ಕನ್ನಡದಲ್ಲಿ ನಿರ್ವಹಿಸಿರುವುದು ಕ್ರೀಡಾಕೂಟದ ವೈಶಿಷ್ಟ್ಯವಾಗಿತ್ತು.
ಮೂರು ದಿನಗಳ (ಡಿ. 10-1 2) ಕ್ರೀಡಾಕೂಟದಲ್ಲಿ ನಗರ ಸಶಸ ಮೀಸಲು ಪಡೆ/ ಜಿಲ್ಲಾ ಸಶಸ ಮೀಸಲು ಪಡೆ, ಮಂಗಳೂರು ಕೇಂದ್ರ ಉಪ ವಿಭಾಗ, ಮಂಗಳೂರು ದಕ್ಷಿಣ ಉಪ ವಿಭಾಗ, ಮಂಗಳೂರು ಉತ್ತರ ಉಪ ವಿಭಾಗ, ಪುತ್ತೂರು ಉಪ ವಿಭಾಗ, ಬಂಟ್ವಾಳ ಉಪ ವಿಭಾಗ ಮತ್ತು ಮಹಿಳಾ ಪೊಲೀಸ್ ಎಂಬ 7 ತಂಡಗಳು ಭಾಗವಹಿಸುತ್ತಿವೆ.

100 ಮೀ, 400 ಮೀ, 800 ಮೀ. ಓಟ, ರಿಲೇ, ಲಾಂಗ್ ಜಂಪ್ ಮತ್ತು ಹೈಜಂಪ್, ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ, ನಿಧಾನ ಮೋಟಾರ್ ಸೈಕಲ್ ಚಾಲನೆ, ್ಯಾನ್ಸಿ ಡ್ರೆಸ್, ಜಮ್ಕಾನಾ ಇತ್ಯಾದಿ ಸ್ಪರ್ಧೆಗಳು ಜರುಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News