ಡಿ. 12ರಿಂದ ದತ್ತಮಾಲಾ ಅಭಿಯಾನಕ್ಕೆ ಚಾಲನೆ

Update: 2018-12-10 16:43 GMT

ಮಂಗಳೂರು, ಡಿ.10: ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತಜಯಂತಿಯ ಅಂಗವಾಗಿ ದತ್ತಮಾಲಾ ಅಭಿಯಾನವು ಡಿ.12ರಿಂದ 21ರವರೆಗೆ ನಡೆಯಲಿದ್ದು, ಡಿ.22ರಂದು ಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಅಭಿಯಾನ ಕೈಗೊಳ್ಳಲಿದ್ದಾರೆ. ಇದರಲ್ಲಿ ರಾಜ್ಯದ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಜರರಂಗದಳ ದಕ್ಷಿಣ ಪ್ರಾಂತದ ಪ್ರಾಂತ ಸಂಯೋಜಕ್ ಸುನೀಲ್ ಕೆ.ಆರ್. ತಿಳಿಸಿದರು.

ನಗರದ ವಿಹಿಪಂ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 20ರಂದು ದತ್ತಪೀಠದಲ್ಲಿ ಅನುಸೂಯ ದೇವಿ ಪೂಜೆ, ಗಣಪತಿ ಹೋಮ ಮತ್ತು ದುರ್ಗಾ ಹೋಮ, ಬೆಳಗ್ಗೆ 9:30ಕ್ಕೆ ಮಹಿಳೆಯರಿಂದ ಸಂಕೀರ್ತನಾಯಾತ್ರೆ ಮತ್ತು ದತ್ತಪೀಠ ದರ್ಶನ ನಡೆಯಲಿದೆ. ಡಿ.21ರಂದು ಗಣಪತಿ ಹೋಮ, ರುದ್ರಹೋಮ ಹಾಗೂ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ಸಾರ್ವಜನಿಕ ಸಭೆ, ಡಿ.22ರಂದು ದತ್ತಜಯಂತಿಯಂದು ಗಣಪತಿ ಹೋಮ, ದತ್ತಹೋಮ ಹಾಗೂ ದತ್ತಪೀಠ, ದತ್ತಪಾದುಕೆ ದರ್ಶನ ನಡೆಯಲಿದೆ ಎಂದರು.

ಬಜರಂಗದಳ ದಕ್ಷಿಣ ಪ್ರಾಂತದ ಪ್ರಾಂತ ಸಹಸಂಯೋಜಕ್ ಮುರಳಿ ಹಸಂತ್ತಡ್ಕ ಮಾತನಾಡಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳಿಂದ 15 ಸಾವಿರ ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ಡಿ.12ಕ್ಕೆ ಮಂಗಳೂರಿನ ವಿಶ್ವಶ್ರೀ ಕಾರ್ಯಾಲಯ, ಉಡುಪಿ ಜಿಲ್ಲೆಯ ಕೃಷ್ಣಮಠ, ಪುತ್ತೂರಿನ ಮಹಾಲಿಂಗೇಶ್ವರ ಸನ್ನಿಧಾನ, ಕೊಡಗುವಿನ ಓಂಕಾರೇಶ್ವರ ಸನ್ನಿಧಾನ, ಕಾಸರಗೋಡು ಹೊಸಂಗಡಿ ಕಾರ್ಯಾಲಯದಲ್ಲಿ ಬಜರಂಗದಳ ಕಾರ್ಯಕರ್ತರು ಮಾಲಾಧಾರಣೆ ಮಾಡಲಿದ್ದಾರೆ ಎಂದರು.

ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಸರಕಾರ ಈವರೆಗೆ ಅರ್ಚಕರನ್ನು ನೇಮಿಸಿಲ್ಲ. ಶಾಖಾದ್ರಿಯವರೇ ತೀರ್ಥ ಪ್ರಸಾದ ನೀಡುತ್ತಿದ್ದಾರೆ. ಸರಕಾರ ಅರ್ಚಕರನ್ನು ನೇಮಿಸಿ ಪತ್ರಿದಿನ ತ್ರಿಕಾಲ ಪೂಜೆ ನಡೆಯುವಂತಾಗಬೇಕು. ದತ್ತಪೀಠಕ್ಕೆ ಒಬ್ಬ ಶಾಶ್ವತ ಹಿಂದೂ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಿಸಬೇಕು, ದತ್ತಪೀಠದಲ್ಲಿ ಯಾವುದೇ ಇಸ್ಲಾಮಿನ ಚಟುವಟಿಕೆಗೆ ಅವಕಾಶ ನೀಡಬಾರದು, ಇಸ್ಲಾಂ ವಿಧಾನಗಳು ಮತ್ತು ಗೋರಿಗಳನ್ನು ನಾಗೇಹಳ್ಳಿಯಲ್ಲಿರುವ ಮೂಲಬಾಬುಬುಡನ್ ದರ್ಗಾಕ್ಕೆ ವರ್ಗಾಯಿಸಬೇಕು, ಗುರು ದತ್ತಾತ್ರೇಯ ಪೀಠ ಮತ್ತು ಪರಿಸರವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸಬೇಕು, ದತ್ತಪಿಠದಲ್ಲಿದ್ದ ಅಮೂಲ್ಯ ವಿಗ್ರಹಗಳ ಅತ್ರಿಕ್ರಮಣ, ಕಾಣೆಯಾಗಿರುವ ಕಾಣಿಕೆ ವಸ್ತುಗಳು ಮತ್ತು ಆಸ್ತಿಪಾಸ್ತಿ ಅಕ್ರಮ ಹಸ್ತಾಂತರ ಹಾಗೂ ಮಾರಾಟವಾಗಿದ್ದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ಅವುಗಳ ಪುನಃ ಪ್ರತಿಷ್ಠಾಪಿಸಬೇಕು, ದತ್ತಪೀಠಕ್ಕೆ ಬರುವ ಹಿಂದೂಗಳಿಗೆ, ಸ್ವಾಮೀಜಿಗಳಿಗೆ ಪೂಜೆ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಎಂದು ಮುರಳಿ ಹಸಂತ್ತಡ್ಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ್ ಪ್ರವೀಣ್ ಕುತ್ತಾರ್, ಜಿಲ್ಲಾ ಸಹಸಂಯೋಜಕ್ ಪುನೀತ್ ಅತ್ತಾವರ್, ಮುಖಂಡ ಶ್ರೀಧರ್ ತೆಂಕಿಲ್ಲ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News