ಮರಳು ಮಾಫಿಯಾಕ್ಕೆ ಬಲಿಯಾದವರು ಯಾರು ಎಂಬುದು ಭವಿಷ್ಯದಲ್ಲಿ ಗೊತ್ತಾಗಲಿದೆ: ಪ್ರಮೋದ್ ಮಧ್ವರಾಜ್

Update: 2018-12-10 14:10 GMT

ಶಿರ್ವ, ಡಿ.10:ಮರಳು ಮಾಫಿಯಾದಿಂದ ನನಗೆ ಯಾವುದೇ ಲಾಭ ಆಗಬೇಕಾಗಿಲ್ಲ. ಅವರು ಚುನಾವಣೆಯಲ್ಲಿ ನನಗೆ ಯಾವುದೇ ರೀತಿಯಲ್ಲೂ ಬೆಂಬಲ ಕೊಟ್ಟಿಲ್ಲ. ಅವರಿಂದ ನಾನು ದುಡ್ಡನ್ನು ಕೂಡ ಪಡೆದಿಲ್ಲ. ಆದರೆ ಮರಳು ಮಾಫಿಯಾಕ್ಕೆ ಬಲಿಯಾದವರು ಯಾರು ಎಂಬುದು ಭವಿಷ್ಯದಲ್ಲಿ ಜನರಿಗೆ ಗೊತ್ತಾಗಲಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ 165 ಪರವಾನಿಗೆಯನ್ನು ನೀಡುವ ಮೂಲಕ 28 ಬ್ಲಾಕ್‌ಗಳಲ್ಲಿ ಮರಳು ತೆಗೆಯುವ ವ್ಯವಸ್ಥೆ ಮಾಡಿದ್ದೇನೆ. ಅಲ್ಲದೆ ಗುರುತಿಸಲಾದ 9ಲಕ್ಷ ಟನ್ ಮರಳಿ ನಲ್ಲಿ ಆರು ಲಕ್ಷ ಟನ್ ಮರಳನ್ನು ತೆಗೆಯಲಾಗಿತ್ತು. ಈ ಅವಧಿಯಲ್ಲಿ ಜಿಲ್ಲೆಯ ಮರಳು ಬೆಂಗಳೂರು ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಗೆ ಹೋಗದಂತೆ ತಡೆದು, ಉಡುಪಿ ಜಿಲ್ಲೆ ಮರಳು ಉಡುಪಿಯ ಜನತೆಗೆಯೇ ಸಿಗಬೇಕೆಂಬ ನಿಯಮ ಮಾಡಿದ್ದೆ. ಇದರಿಂದ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಮರಳು ಸಿಗುತ್ತಿತ್ತು. ಈ ಕಾರಣಕ್ಕಾಗಿ ನಾನು ಮರಳು ಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿದ್ದೆ. ಅಲ್ಲದೆ ಅವರು ಹತಾಶಗೊಂಡು ನನ್ನ ಮೇಲೆ ಆರೋಪಗಳನ್ನು ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಸಿಆರ್‌ಝೆಡ್ ಮರಳು ಸಮಸ್ಯೆ ಕೇವಲ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತ ವಾಗಿರದೆ ಕರಾವಳಿಯ ಮೂರು ಜಿಲ್ಲೆಗಳಲ್ಲಿದ್ದರೂ ನಾನು ತಪ್ಪು ಮಾಡಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದು ಖಂಡನೀಯ. ಕಳೆದ ಚುನಾವಣೆಯಲ್ಲಿ ರಘುಪತಿ ಭಟ್, ನಾನು ಶಾಸಕರಾದರೆ ಒಂದು ತಿಂಗಳೊಳಗೆ ಮರಳು ಸಮಸ್ಯೆ ಪರಿಹರಿಸಿ ನ್ಯಾಯ ಕೊಡುವುದಾಗಿ ಮಾತು ಕೊಟ್ಟಿದ್ದರು. ಈಗ ಅವರು ಶಾಸಕರಾಗಿ ಆರು ಏಳು ತಿಂಗಳಾದರೂ ಕೂಡ ಇಂದಿಗೂ ಮರಳನ್ನು ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ಅವರ ವೈಫಲ್ಯವನ್ನು ನನ್ನ ತಲೆಗೆ ಕಟ್ಟಿಕೊಡುತ್ತಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಕಾನೂನು ಬದ್ಧವಾಗಿ ಕೆಲಸ ಮಾಡುವುದು ಅವರ ಕರ್ತವ್ಯವಾಗಿದೆ. ಕಾನೂನು ಮೀರಿ ಅಧಿಕಾರಿಗಳ ಮೇಲೆ ಒತ್ತಡ ತರುವುದು ಇಂದಿನ ಕಾಲದಲ್ಲಿ ಕಷ್ಟ ಸಾಧ್ಯ ಎಂಬುದನ್ನು ರಘುಪತಿ ಭಟ್ ಮನವರಿಕೆ ಮಾಡಿಕೊಳ್ಳಬೇಕು. ಕಾನೂನು ಮೀರಿ ರಘುಪತಿ ಭಟ್ ಹೇಳಿದಂತೆ ಕೇಳಿದರೆ ಅಧಿಕಾರಿಗಳು ಮತ್ತೆ ಹಸಿರು ಪೀಠದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಜನರಿಗೆ ಮರಳು ಸಿಗಬೇಕು. ಜಿಲ್ಲೆಯ ಮರಳು ಹೊರ ಜಿಲ್ಲೆಗೆ ಹೋಗಬಾರದು. ನನ್ನ ಅವಧಿಯಲ್ಲಿ ನೀಡಿದ ಎಲ್ಲ 165 ಮಂದಿಗೂ ಪರ ವಾನಿಗೆ ನೀಡಬೇಕು. ಯಾವುದೇ ಮಂತ್ರಿ ಅಥವಾ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮರಳು ಸಿಗದಂತೆ ಮಾಡುವ ಮೂರ್ಖ ನಾನಲ್ಲ. ನನಗೂ ಜನರ ಹಿತ ಮುಖ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮರಳು ನೀತಿಯನ್ನು ಸರಳೀಕರಣಗೊಳಿಸಿ ಅತಿ ಕಡಿಮೆ ದರದಲ್ಲಿ ಮರಳು ಸಿಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನನ್ನ ಅವಧಿಯಲ್ಲಿ ಅ.14ರಿಂದ ಮರಳು ಸಿಕ್ಕಿದ್ದರೆ ಈ ವರ್ಷ ಡಿಸೆಂಬರ್ ತಿಂಗಳಾದರೂ ಮರಳು ಸಿಗದಿರುವುದಕ್ಕೆ ರಘುಪತಿ ಭಟ್‌ಗೆ ಇರುವ ಕಾನೂನಿನ ಅಜ್ಞಾನವೇ ಕಾರಣ. ರಘುಪತಿ ಭಟ್ ಮೂರನೆ ಅವಧಿಗೆ ಶಾಸಕ ರಾದರೂ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಕಾರ್ಯ ವೆಸಗಿದರೆ ಉತ್ತಮ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News