2019ರ ಸಾರ್ವತ್ರಿಕ ಚುನಾವಣೆ: ಬಿಜೆಪಿ ವಿರುದ್ಧ ಮೈತ್ರಿ ರಚಿಸಲು ವಿಪಕ್ಷ ನಾಯಕರ ಸಭೆ

Update: 2018-12-10 15:42 GMT

ಹೊಸದಿಲ್ಲಿ,ಡಿ.10: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮೈತ್ರಿ ರಚಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಸೋಮವಾರ ಸಭೆ ನಡೆಸಿದವು. ಮಂಗಳವಾರದಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ ಈ ಸಭೆಗೆ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ನಾಯಕರು ಗೈರಾಗಿದ್ದರು.

ಮಧ್ಯ ಪ್ರದೇಶ, ಚತ್ತೀಸ್‌ಗಡ, ರಾಜಸ್ಥಾನ, ತೆಲಂಗಾಣ ಮತ್ತು ಮಿಝೊರಾಂನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವ ಮುನ್ನ ನಡೆದಿರುವ ಈ ಸಭೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಈ ಸಭೆಯನ್ನು ಸಂಘಟಿಸಿದ್ದು ಅನೇಕ ವಿಪಕ್ಷ ನಾಯಕರನ್ನು ಆಹ್ವಾನಿಸಲಾಗಿತ್ತು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ದಿಲ್ಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಎಚ್.ಡಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎನ್‌ಸಿಪಿ ಮುಖಂಡ ಶರದ್ ಪವಾರ್ ಮತ್ತು ನ್ಯಾಶನಲ್ ಕಾಂಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಇವರೊಂದಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಸಿಪಿಐ ನಾಯಕ ಸುಧಾಕರ ರೆಡ್ಡಿ ಮತ್ತು ಡಿ.ರಾಜ, ಲೋಕತಾಂತ್ರಿಕ ಜನತಾದಳ ಮುಖ್ಯಸ್ಥ ಶರದ್ ಯಾದವ್ ಮತ್ತು ಜಾರ್ಖಂಡ್ ವಿಕಾಸ್ ಮೋರ್ಚಾದ ಬಾಬುಲಾಲ್ ಮರಾಂಡಿ ಭಾಗವಹಿಸಿದ್ದರು. ಈ ಸಭೆಯನ್ನು, ಭ್ರಷ್ಟರು ತಮ್ಮನ್ನು ರಕ್ಷಿಸಿಕೊಳ್ಳಲು ಮಾಡಿರುವ ಸಭೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವ್ಯಾಖ್ಯಾನಿಸಿದ್ದು ಇದು ಕೇವಲ ಫೋಟೊ ತೆಗೆಯುವ ಅವಕಾಶವಷ್ಟೇ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News