ಶಾಸನಬದ್ಧ ಸಂಸ್ಥೆಗಳಲ್ಲಿ ವಿಪಕ್ಷ ನಾಯಕರ ನೇಮಕ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Update: 2018-12-10 15:53 GMT

ಹೊಸದಿಲ್ಲಿ,ಡಿ.10: ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ವಿಪಕ್ಷಗಳ ನಾಯಕ ಎಂದು ಪರಿಗಣಿಸಬೇಕು ಮತ್ತು ಅವರನ್ನು ಶಾಸನಬದ್ಧ ಸಂಸ್ಥೆಗಳಾದ ಸಿಬಿಐ,ಸಿವಿಸಿ, ಸಿಐಸಿ ಮತ್ತು ಲೋಕಪಾಲ್‌ಗೆ ಮುಖ್ಯಸ್ಥರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಉನ್ನತ ಮಟ್ಟದ ಸಮಿತಿಗಳಲ್ಲಿ ಸೇರಿಸಬೇಕು ಎಂದು ಮನವಿ ಮಾಡಿ ಹಾಕಲಾದ ಅರ್ಜಿ ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಎಲ್ಲ ಸರಕಾರಿ ಸೇವಕರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗೊಳಪಡಿಸುವುದರ ವಿರುದ್ಧ ಸಂಪೂರ್ಣ ರಕ್ಷಣೆ ನೀಡುವ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎಯನ್ನು ರದ್ದುಗೊಳಿಸುವಂತೆ ಎನ್‌ಜಿಒ ಯೂತ್ ಫೋರ್ ಇಕ್ವಾಲಿಟಿ ಸಲ್ಲಿಸಿರುವ ಅರ್ಜಿಗೂ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿದೆ. ಸೆಕ್ಷನ್ 17ಎಯನ್ನು ಅನುಷ್ಠಾನಕ್ಕೆ ತರಲು ಮಾಡಲಾಗಿರುವ ತಿದ್ದುಪಡಿಯು ತಾರತಮ್ಯ, ಅನಿಯಂತ್ರಿತವಾಗಿದೆ ಎಂದು ಎನ್‌ಜಿಒ ಆರೋಪಿಸಿದೆ. ಸಂಕ್ಷಿಪ್ತ ಆಲಿಕೆಯ ನಂತರ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶ ಎಸ್.ಕೆ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ ಎರಡು ಅರ್ಜಿಗಳನ್ನು ಪರಿಶೀಲಿಸಲು ಒಪ್ಪಿಗೆ ನೀಡಿತು.

ಆದರೆ ಸಿಬಿಐ ನಿರ್ದೇಶಕ, ಕೇಂದ್ರ ವಿಚಕ್ಷಣ ಆಯುಕ್ತ, ಮುಖ್ಯ ಮಾಹಿತಿ ಆಯುಕ್ತ ಮತ್ತು ಲೋಕಪಾಲರನ್ನು ನೇಮಕ ಮಾಡುವ ನಿರ್ಧಾರವನ್ನು ಆಯ್ಕೆ ಸಮಿತಿಯ ಅವಿರೋಧ ಮತಗಳ ಮೂಲಕ ತೆಗೆದುಕೊಳ್ಳಬೇಕು ಎಂಬ ಮನವಿಯನ್ನು ಆಲಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News