ವಿವಿಐಪಿ ಹೆಲಿಕಾಪ್ಟರ್ ಹಗರಣ: ಕ್ರಿಶ್ಚಿಯನ್ ಮೈಕಲ್ ಬಂಧನ ಅವಧಿ ವಿಸ್ತರಣೆ

Update: 2018-12-10 15:56 GMT

ಹೊಸದಿಲ್ಲಿ,ಡಿ.10: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‌ನ ಬಂಧನ ಅವಧಿಯನ್ನು ದಿಲ್ಲಿ ನ್ಯಾಯಾಲಯ ಐದು ದಿನಗಳ ಕಾಲ ವಿಸ್ತರಿಸಿದೆ.

ಮೈಕಲ್‌ನ ಐದು ದಿನಗಳ ಸಿಬಿಐ ರಿಮಾಂಡ್ ಮುಗಿದ ನಂತರ ಅವರನ್ನು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರ ಮುಂದೆ ಹಾಜರುಪಡಿಸಲಾಯಿತು. ಮೈಕಲ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವ ಸಿಬಿಐ ಅಧಿಕಾರಿಗಳು ಅವರನ್ನು ಮತ್ತೆ ಒಂಬತ್ತು ದಿನಗಳ ಕಾಲ ತಮ್ಮ ಸುಪರ್ದಿಗೆ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮೈಕಲ್ ಪರ ವಕೀಲ ಇಲ್ಲಿಯವರೆಗೆ ಸಿಬಿಐ ಮೈಕಲ್‌ಗೆ ಯಾವುದೇ ಗುರುತರ ಸಾಕ್ಷಿಯನ್ನು ತೋರಿಸಿಲ್ಲ. ಹಾಗಾಗಿ ಬಂಧನ ಅವಧಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮೈಕಲ್ ತಾನು ಹಿಂದೆ ಹಾಕಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದು ಹೊಸದಾಗಿ ವಿವರವಾದ ಜಾಮೀನು ಅರ್ಜಿಯನ್ನು ಹಾಕಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಇಯಿಂದ ಗಡಿಪಾಡಿಗೆ ಒಳಗಾಗಿ ಡಿಸೆಂಬರ್ 4ರ ರಾತ್ರಿ ಭಾರತಕ್ಕೆ ಕರೆತರಲ್ಪಟ್ಟ ಬ್ರಿಟನ್ ಪ್ರಜೆ ಕ್ರಿಶ್ಚಿಯನ್ ಮೈಕಲ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ಅವರನ್ನು ಐದು ದಿನಗಳ ಕಾಲ ಸಿಬಿಐ ಸುಪರ್ದಿಗೆ ನೀಡಲಾಗಿತ್ತು. ಮೈಕಲ್‌ಗೆ ದೋಷಾರೋಪ ಸೇರಿದಂತೆ ಎಲ್ಲ ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯ ಸಿಬಿಐಗೆ ಸೂಚಿಸಿತ್ತು.

ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿಗಳೆಂದು ಹೆಸರಿಸಲಾಗಿರುವವರ ಪೈಕಿ ಮೈಕಲ್ ಒಬ್ಬರಾಗಿದ್ದಾರೆ. ಅವರ ಜೊತೆಗೆ ಗೀಡೊ ಹಶ್ಕೆ ಮತ್ತು ಕಾರ್ಲೊ ಜೆರೊಸಾರನ್ನೂ ಇಡಿ ಮತ್ತು ಸಿಬಿಐ ವಿಚಾರಣೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News