×
Ad

ಮರಾಠಾ ಮೀಸಲಾತಿ ವಿರೋಧಿಸಿದ ವಕೀಲನಿಗೆ ಹೈಕೋರ್ಟ್‌ ಮುಂದೆ ಹಲ್ಲೆ

Update: 2018-12-10 22:06 IST

ಮುಂಬೈ,ಡಿ.10: ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಒದಗಿಸುವ ನೂತನ ಶಾಸನದ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿರುವ ವಕೀಲ ಗುಣರತ್ನ ಸದಾವರ್ತೆ ಅವರ ಮೇಲೆ ಸೋಮವಾರ ಹಲ್ಲೆ ನಡೆದಿದೆ. ಸದಾವರ್ತೆ ಅವರು ನ್ಯಾಯಾಲಯದ ಹೊರಗೆ ಸುದ್ದಿಗಾರರೊಡನೆ ಮಾತನಾಡುತ್ತಿದ್ದಾಗ ಮೀಸಲಾತಿಯನ್ನು ಬೆಂಬಲಿಸಿ ‘ಏಕ್ ಮರಾಠಾ ಲಾಖ್ ಮರಾಠಾ’ಎಂಬ ಘೋಷಣೆಯನ್ನು ಕೂಗುತ್ತ ಅವರತ್ತ ಧಾವಿಸಿದ ವ್ಯಕ್ತಿಯೋರ್ವ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

 ಸ್ಥಳದಲ್ಲಿದ್ದ ಪೊಲೀಸರು ಮತ್ತು ವಕೀಲರು ತಕ್ಷಣ ಹಲ್ಲೆಕೋರನನ್ನು ಹಿಡಿದಿದ್ದು,ಆತನನ್ನು ಜಾಲ್ನಾ ಜಿಲ್ಲೆಯ ನಿವಾಸಿ,ಮರಾಠಾ ಸಮುದಾಯಕ್ಕೆ ಸೇರಿದ ವೈಜನಾಥ ಪಾಟೀಲ ಎಂದು ಗುರುತಿಸಲಾಗಿದೆ.

ರಾಜ್ಯದಲ್ಲಿ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮರಾಠಾ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿಯನ್ನು ಒದಗಿಸಲು ತರಲಾಗಿರುವ ನೂತನ ಕಾನೂನು ಜಾತಿ ಮತ್ತು ಸಮುದಾಯ ಆಧರಿತ ಮೀಸಲಾತಿಯು ಶೇ.50ನ್ನು ಮೀರಕೂಡದು ಎಂಬ ಸರ್ವೋಚ್ಚ ನ್ಯಾಯಾಲಯದ ಹಿಂದಿನ ಆದೇಶವನ್ನು ಉಲ್ಲಂಘಿಸಿದೆ ಎಂದು ಸದಾವರ್ತೆ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News