ಶಾಸಕರ ಹಕ್ಕುಚ್ಯುತಿ ಆರೋಪ: ಜಿಪಂ ಸದಸ್ಯನ ಬಂಧನಕ್ಕೆ ಬಿಜೆಪಿ ಆಗ್ರಹ

Update: 2018-12-10 17:15 GMT

ಬಂಟ್ವಾಳ, ಡಿ. 10: ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾಯಕ್ರಮದಲ್ಲಿ ಆಗಿರುವ ಗೊಂದಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಕ್ಷಮೆಯಾಚಿಸಿರುವುದನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಸ್ವಾಗತಿಸಿದ್ದು, ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಮತ್ತು ಶಾಸಕರ ಹಕ್ಕು ಚ್ಯುತಿಗೆ ಕಾರಣಕರ್ತರಾದ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತವರ ಬೆಂಬಲಿಗರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರೂ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತು ಬೆಂಬಲಿಗರ ಗೂಂಡಾ ವರ್ತನೆಯಿಂದ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಪುರಸಭೆಯ ಸದಸ್ಯೆಯರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಈವರೆಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಉತ್ತರಿಸಲಿ ಎಂದರು.

ಕ್ಯಾಂಟೀನ್‍ನ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಾಗಿದ್ದರೂ ಇದನ್ನು ಕಾಂಗ್ರೆಸ್ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಎಲ್ಲಡೆ ಕಾಂಗ್ರೆಸ್ ನಾಯಕರ ಫ್ಲೆಕ್ಸ್, ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು. ಆದರೆ, ಬಿಜೆಪಿ ಎಲ್ಲೂ ತಮ್ಮ ಶಾಸಕರ, ಸಂಸದರ ಫ್ಲೆಕ್ಸ್ ಹಾಕಿಲ್ಲ ಎಂದರು. ಮಾಜಿ ಮತ್ತು ಹಾಲಿ ಸಚಿವರು, ಅಧಿಕಾರಿಗಳ ಸಮ್ಮುಖದಲ್ಲಿಯೇ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಏರುಧ್ವನಿಯಲ್ಲಿ ಶಾಸಕರನ್ನು ಪ್ರಶ್ನಿಸುವ ಮೂಲಕ ಗೊಂದಲಕ್ಕೆ ಕಾರಣರಾಗಿದ್ದಾರೆ ಎಂದರು.

ರೈಯನ್ನು ಬಿಜೆಪಿ ಸೋಲಿಸಿಲ್ಲ

ರಮಾನಾಥ ರೈ ಸೋಲಿನಲ್ಲಿ ಹಾಗೂ ಸಾರ್ವತ್ರಿಕ ವಲಯದಲ್ಲಿ ಈಗ ಅನುಭವಿಸುತ್ತಿರುವ ಅವಮಾನಕ್ಕೆ ಬಿಜೆಪಿ ಕಾರಣ ಅಲ್ಲ. ಅವರ ಸುತ್ತ ಇರುವ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತಿತರರೇ ಕಾರಣ. ಈ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಈ ಸಂದರ್ಭ ಉಪಸ್ಥತರಿದ್ದ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಭಟ್, ಪಕ್ಷದ ಮುಖಂಡರಾದ ಜಿ.ಆನಂದ, ದಿನೇಶ್ ಅಮ್ಟೂರು, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಅಭಿಷೇಕ್ ರೈ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News