‘ಸಾರ್ಕ್’ ಸಭೆಯಲ್ಲಿ ಪಿಒಕೆ ಸಚಿವ ಉಪಸ್ಥಿತಿ: ಭಾರತೀಯ ರಾಜತಾಂತ್ರಿಕ ಸಭಾತ್ಯಾಗ

Update: 2018-12-10 17:28 GMT

ಇಸ್ಲಾಮಾಬಾದ್, ಡಿ. 10: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಸಚಿವರೊಬ್ಬರ ಉಪಸ್ಥಿತಿಯನ್ನು ಪ್ರತಿಭಟಿಸಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಶನ್‌ನ ಅಧಿಕಾರಿಯೊಬ್ಬರು ‘ಸಾರ್ಕ್’ ಸಭೆಯಿಂದ ಹೊರನಡೆದರು ಎಂದು ಇಸ್ಲಾಮಾಬಾದ್‌ನ ಮೂಲವೊಂದು ತಿಳಿಸಿದೆ.

‘ಸಾರ್ಕ್ ಸ್ಥಾಪನಾ (ಚಾರ್ಟರ್) ದಿನ’ದ ಸಂದರ್ಭದಲ್ಲಿ ಇಸ್ಲಾಮಾಬಾದ್‌ನಲ್ಲಿ ರವಿವಾರ ನಡೆದ ‘ಸಾರ್ಕ್ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್’ ಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಸಚಿವ ಚೌಧರಿ ಮುಹಮ್ಮದ್ ಸಯೀದ್ ಉಪಸ್ಥಿತಿಯನ್ನು ಪ್ರತಿಭಟಿಸಿ ಭಾರತೀಯ ರಾಜತಾಂತ್ರಿಕ ಶುಭಮ್ ಸಿಂಗ್ ಸಭೆಯಿಂದ ಹೊರನಡೆದರು.

ಕಾಶ್ಮೀರ ತನ್ನ ಅವಿಭಾಜ್ಯ ಭಾಗ ಎಂಬುದಾಗಿ ಭಾರತ ಪರಿಗಣಿಸುತ್ತದೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಯಾವುದೇ ಸಚಿವರನ್ನು ಅದು ಮಾನ್ಯ ಮಾಡುವುದಿಲ್ಲ.

ಉರಿಯಲ್ಲಿರುವ ಭಾರತೀಯ ಸೇನಾ ಶಿಬಿರದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಿ 2016ರಲ್ಲಿ ಕಾಶ್ಮೀರದಲ್ಲಿ ನಡೆಯಬೇಕಾಗಿದ್ದ 19ನೇ ಸಾರ್ಕ್ ಶೃಂಗ ಸಮ್ಮೇಳನವನ್ನು ಭಾರತ ಬಹಿಷ್ಕರಿಸಿತ್ತು.

ಬಾಂಗ್ಲಾದೇಶ, ಭೂತಾನ್ ಮತ್ತು ಅಫ್ಘಾನಿಸ್ತಾನಗಳೂ ಸಮ್ಮೇಳನವನ್ನು ಬಹಿಷ್ಕರಿಸಿದ ಬಳಿಕ ಸಮ್ಮೇಳನವನ್ನೇ ರದ್ದುಗೊಳಿಸಲಾಗಿತ್ತು. ಅಂದಿನ ಬಳಿಕ ಯಾವುದೇ ಸಾರ್ಕ್ ಸಭೆ ನಡೆದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News