ಬಾಲಕಿಯ ಅತ್ಯಾಚಾರ, ಗರ್ಭಪಾತ ಪ್ರಕರಣ: ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ

Update: 2018-12-10 17:29 GMT

ಮಂಗಳೂರು, ಡಿ.10: ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಬಳಿಕ ಗರ್ಭಪಾತ ಮಾಡಿಸಿದ ಪ್ರಕರಣದ ಆರೋಪಿ ಸುರತ್ಕಲ್ ಸಮೀಪದ ಕಾಟಿಪಳ್ಳ 2ನೇ ಬ್ಲಾಕ್‌ನ ನಿವಾಸಿ ಹಮೀದ್ (44) ನಿಗೆ ಮಂಗಳೂರಿನ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮತ್ತು ಪೊಕ್ಸೊ ವಿಶೇಷ ನ್ಯಾಯಾಲಯವು 7 ವರ್ಷಗಳ ಕಠಿನ ಸಜೆ ಮತ್ತು 20,000 ರೂ. ದಂಡ ವಿಧಿಸಿದೆ.

ಸುರತ್ಕಲ್ ಸಮೀಪ ಬಾಡಿಗೆ ಮನೆಯಲ್ಲಿ ತಾಯಿ ಜತೆ ವಾಸವಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಪರಿಚಯ ಆರೋಪಿ ಹಮೀದ್‌ನಿಗೆ ಮೊದಲಿನಿಂದಲೂ ಇದ್ದು, 2014 ಫೆಬ್ರವರಿಯಲ್ಲಿ ಬಾಲಕಿ ಮಾತ್ರ ಮನೆಯಲ್ಲಿದ್ದಾಗ ಹಮೀದ್ ಅಲ್ಲಿಗೆ ತೆರಳಿ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದು, ಆ ಬಳಿಕ ಸುಮಾರು 6 ತಿಂಗಳ ಕಾಲ ಆಗಿಂದಾಗ್ಗೆ ಈ ಮನೆಗೆ ತೆರಳಿ ಆಕೆಯ ಜತೆ ಲೈಂಗಿಕ ಸಂಪರ್ಕ ಮಾಡಿದ್ದನು. ಇದರಿಂದ ಆಕೆ ಗರ್ಭವತಿ ಆಗಿದ್ದು, ಆಗ ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಪಾತ ಮಾಡಿಸಿದ್ದನು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎ. ನಟರಾಜ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮತ್ತು ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಅವರು ಆರೋಪಿಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಕಲಂ 4 ರನ್ವಯ 7 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ ಹಾಗೂ ಐಪಿಸಿ ಸೆಕ್ಷನ್ 315 (ಗರ್ಭಪಾತ) ಅನ್ವಯ 7 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದರು. ದಂಡ ತೆರಲು ತಪ್ಪಿದರೆ ಎರಡೂ ಸೆಕ್ಷನ್‌ಗಳಡಿ ಮತ್ತೆ ತಲಾ 6 ತಿಂಗಳ ಕಠಿನ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಒಟ್ಟು ದಂಡ ಮೊತ್ತ 20,000 ರೂ.ಗಳಲ್ಲಿ 15,000 ರೂ.ನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು. ಅಲ್ಲದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕವೂ ಆಕೆ ಸರಕಾರದಿಂದ ಪರಿಹಾರ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ವಿವರಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 19 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸರಕಾರದ ಪರವಾಗಿ ಪೊಕ್ಸೊ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News