ಮಣಿಪಾಲ: ಉದ್ಯೋಗಕ್ಕೆ ಆಗ್ರಹಿಸಿ ಯುವಕನಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

Update: 2018-12-10 17:46 GMT

ಮಣಿಪಾಲ, ಡಿ.10: ಮೆಸ್ಕಾಂನಲ್ಲಿ ಲೈನ್‌ಮನ್ ಆಗಿ ದುಡಿಯುತಿದ್ದ ತನ್ನ ತಮ್ಮ ಬ್ರಹ್ಮಾವರದಲ್ಲಿ ಕರ್ತವ್ಯ ನಿರ್ವಹಿಸುತಿದ್ದಾಗ ಅಧಿಕಾರಿಗಳ ನಿರ್ಲಕ್ಷದಿಂದ ಮೃತಪಟ್ಟಿದ್ದು, ಇದರ ಆದಾರದಲ್ಲಿ ಅನುಕಂಪದ ಆಧಾರದ ಮೇಲೆ ಅಂಗವಿಕಲನಾದ ತನಗೆ ಯಾವುದಾದರೂ ಉದ್ಯೋಗವನ್ನು ನೀಡುವಂತೆ ಒತ್ತಾಯಿಸಿ ವಡ್ಡರ್ಸೆಯ ದೇವೇಂದ್ರ ಸುವರ್ಣ ಎಂಬವರು ಇಂದು ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.

ಇದಕ್ಕಾಗಿ ಈಗಾಗಲೇ 10 ಬಾರಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದು, 10 ಬಾರಿ ಅವರ ಜನತಾ ದರ್ಶನದಲ್ಲೂ ಈ ಬಗ್ಗೆ ಮನವಿ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ಲಿಖಿತ ಆದೇಶ ನೀಡಿದರೂ, ಮೆಸ್ಕಾಂ ಅಧಿಕಾರಿಗಳು ಇನ್ನೂ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಯಾವುದೇ ಕೆಲಸ ನೀಡಲು ತಯಾರಿಲ್ಲ ಎಂದರು.

ಮೀನುಗಾರಿಕಾ ವೃತ್ತಿಯಲ್ಲಿದ್ದ ತಾನು 2014ರ ನ.8ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಇನ್ನೂ ಸಂಪೂರ್ಣ ಚೇತರಿಸಿಕೊಂ ಡಿಲ್ಲ. 17ವರ್ಷ ಪ್ರಾಯದ ಬಾಲಕನೊಬ್ಬ ಮೂವರನ್ನು ಕುಳ್ಳಿರಿಸಿಕೊಂಡು ವೇಗವಾಗಿ ಬೈಕ್ ಚಲಾಯಿಸಿ ಈ ಅಪಘಾತ ಮಾಡಿದ್ದು, ತನಗೆ ಅದರಲ್ಲೂ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದವರು ಆರೋಪಿಸಿದರು.

ಅಂಗವಿಕಲನಾದ ತಾನು ಕೆಲಸಕ್ಕಾಗಿ 20ಕ್ಕೂ ಹೆಚ್ಚು ಬಾರಿ ಬೆಂಗಳೂರಿಗೆ ಅಲೆದಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಖುದ್ದು ಕಂಡು ಮನವಿ ಸಲ್ಲಿಸಿದ್ದೇನೆ. ಆದರೆ ತಾನು ವಿವಾಹಿತ ಎಂಬ ಒಂದೇ ಕಾರಣದ ಮೇಲೆ ಅನುಕಂಪದ ಆಧಾರದಲ್ಲಿ ಸಿಗಬೇಕಾದ ಉದ್ಯೋಗವನ್ನು ನಿರಾಕರಿಸಲಾಗುತ್ತಿದೆ. ಇದರಿಂದ ಕುಟುಂಬವನ್ನು ಸಾಕಲಾರದೇ ತಾನು ಬಸವಳಿದಿದ್ದೇನೆ ಎಂದು ದೇವೇಂದ್ರ ಸುವರ್ಣ ತಿಳಿಸಿದರು.

ಇದೀಗ ಕೊನೆಯ ಪ್ರಯತ್ನವಾಗಿ ತನಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದೇನೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News