×
Ad

ಡಿ.14-15: ಎಜೆ ಆಸ್ಪತ್ರೆಯಲ್ಲಿ ರಾಷ್ಟ್ರ ಮಟ್ಟದ ಸಮ್ಮೇಳನ

Update: 2018-12-11 21:06 IST

ಮಂಗಳೂರು, ಡಿ.11: ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇದರ ಅಂಗ ಸಂಸ್ಥೆಯಾದ ನಗರದ ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ನಲ್ಲಿ ಡಿ.14 ಮತ್ತು 15ರಂದು ರಾಷ್ಟ್ರಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಡಾ. ಟಿ. ಜಯಪ್ರಕಾಶ್ ರಾವ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಗಳ ನಿರ್ದೇಶಕ ಡಾ. ಮಂಜುನಾಥ್ ಇವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಟ್ರಸ್ಟ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕದ ಸ್ನಾತಕೋತ್ತರ ಕಾಲೇಜುಗಳ ಸಂಘದ ಪದಾಧಿಕಾರಿಗಳಾದ ಡಾ. ವೂಡೇ ಪಿ.ಕೃಷ್ಣನ್, ಡಾ. ಸೋಮಶೇಖರ್, ಡಾ. ಪ್ರಕಾಶ್ ಹಾಗೂ ಬಸವರಾಜ್ ರಮ್ನಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

‘ವ್ಯವಹಾರ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ, ಉಪಕ್ರಮಗಳ ಮೂಲಕ ಸಾಮಾಜಿಕ ಉದ್ದಿಮೆಗಳ ಕ್ರೋಢೀಕರಣ: ಸಮಸ್ಯೆಗಳು ಹಾಗೂ ಸವಾಲುಗಳು’ ಎಂಬ ಪರಿಕಲ್ಪನೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ವಿವರಿಸಿದರು.

ಡಿ.15 ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ನಿರ್ದೇಶಕಿ ಆಶ್ರಿತಾ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಲಕ್ನೋದಲ್ಲಿರುವ ಲಕ್ನೋ ವಿಶ್ವವಿದ್ಯಾನಿಲಯ ನಗರ ಪ್ರದೇಶ ಹಾಗೂ ಪರಿಸರ ಅಧ್ಯಯನದ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಡಾ. ಎ.ಕೆ.ಸಿಂಗ್, ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನದ ಮುಖ್ಯ ವಿಷಯಕ್ಕೆ ಸಂಬಂಧಿಸಿದ ವಿಚಾರಗೋಷ್ಠಿಗಳು ನಡೆಯಲಿದ್ದು, ಎಲ್ಲಾ ತಾಂತ್ರಿಕ ವಿಚಾರ ಗೋಷ್ಠಿಗಳ ಕೊನೆಯಲ್ಲಿ ತಜ್ಞರಿಂದ ಹಾಗೂ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಬೋಧಕ ಸಿಬಂದಿಗಳಾದ ದೀಪಕ್ ರಾವ್, ಚೇತನ್‌ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News