ಅಂತಾರಾಷ್ಟ್ರೀಯ ಕಾನೂನಿನಡಿ ಖಶೋಗಿಗೆ ನ್ಯಾಯ: ಟರ್ಕಿ ಒತ್ತಾಯ

Update: 2018-12-11 17:14 GMT

ಅಂಕಾರ, ಡಿ. 11: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಅಂತಾರಾಷ್ಟ್ರೀಯ ಕಾನೂನಿನಡಿ ಜಗತ್ತು ನ್ಯಾಯ ಕೇಳಬೇಕು ಎಂದು ಟರ್ಕಿ ಸೋಮವಾರ ಹೇಳಿದೆ.

ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಲಾಗಿದೆ ಎಂಬುದಾಗಿ ಆರೋಪಿಸಿರುವ ಸೌದಿ ಅರೇಬಿಯದ ಇಬ್ಬರು ಅಧಿಕಾರಿಗಳನ್ನು ಟರ್ಕಿಗೆ ಹಸ್ತಾಂತರಿಸಲು ಸೌದಿ ಅರೇಬಿಯ ನಿರಾಕರಿಸಿದ ಬಳಿಕ ಅದು ಈ ಬೇಡಿಕೆ ಇಟ್ಟಿದೆ.

ಶಂಕಿತರನ್ನು ಹಸ್ತಾಂತರಿಸಲು ನಿರಾಕರಿಸುವ ಸೌದಿ ಅರೇಬಿಯದ ನಿರ್ಧಾರ ಅತ್ಯಂತ ದುರದೃಷ್ಟಕರ ಹಾಗೂ ‘ಹತ್ಯೆಯನ್ನು ಮುಚ್ಚಿಹಾಕಲು ಸೌದಿ ಅರೇಬಿಯ ಪ್ರಯತ್ನಿಸುತ್ತಿದೆ’ ಎಂಬ ಟೀಕಾಕಾರರ ಮಾತುಗಳಿಗೆ ಪೂರಕವಾಗಿದೆ ಎಂದು ಟರ್ಕಿ ಅಧ್ಯಕ್ಷರ ಕಚೇರಿಯಲ್ಲಿ ಸಂಪರ್ಕ ವಿಭಾಗದ ನಿರ್ದೇಶಕ ಫಹ್ರೆಟ್ಟಿನ್ ಅಲ್ತೂನ್ ಹೇಳಿದರು.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರರಾಗಿದ್ದ ಖಶೋಗಿ ಅಮೆರಿಕಕ್ಕೆ ಪಲಾಯನ ಮಾಡಿದ್ದರು. ತನ್ನ ಟರ್ಕಿಯ ಗೆಳತಿಯೊಂದಿಗೆ ಮದುವೆಯಾಗುವ ಉದ್ದೇಶದಿಂದ, ತನ್ನ ಹಿಂದಿನ ಮದುವೆಯ ದಾಖಲೆಪತ್ರಗಳನ್ನು ತರಲು ಅವರು ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್ ಕಚೇರಿಗೆ ಹೋಗಿದ್ದರು. ಅಲ್ಲಿಂದ ಅವರು ವಾಪಸ್ ಬಂದಿಲ್ಲ.

ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಯನ್ನು ಕೊಲೆ ಮಾಡಲಾಯಿತು ಎಂಬುದಾಗಿ ಎರಡು ವಾರಗಳ ಬಳಿಕ ಸೌದಿ ಅರೇಬಿಯ ಒಪ್ಪಿಕೊಂಡಿತು.

ಖಶೋಗಿ ಹತ್ಯಾ ತನಿಖೆಯಲ್ಲಿ ಸೌದಿ ಅರೇಬಿಯದ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಹಾಗೂ ಖಶೋಗಿಗೆ ಏನಾಯಿತು ಎಂಬುದರ ಮೇಲೆ ಬೆಳಕು ಚೆಲ್ಲಲು ಸೌದಿ ಪ್ರಾಸಿಕ್ಯೂಟರ್‌ಗಳು ಮುಂದಾಗಿಲ್ಲ ಎಂದು ಫಹ್ರೆಟ್ಟಿನ್ ಅಲ್ತೂನ್ ಹೇಳಿದರು.

‘‘ಹಾಗಾಗಿ, ದಿವಂಗತ ಸೌದಿ ಪತ್ರಕರ್ತನಿಗೆ ಅಂತರ್‌ರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನ್ಯಾಯ ಕೇಳಲು ಪ್ರಯತ್ನಿಸುವುದು ಅಂತಾರಾಷ್ಟ್ರೀಯ ಸಮುದಾಯದ ಹಿತಾಸಕ್ತಿಯಿಂದ ಒಳ್ಳೆಯದು’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News