ರಾಷ್ಟ್ರೀಯ ಶಾಂತಿ ಪ್ರಕ್ರಿಯೆಗೆ ಸಂಪೂರ್ಣ ಬೆಂಬಲ: ಮ್ಯಾನ್ಮಾರ್‌ಗೆ ರಾಷ್ಟ್ರಪತಿ ಕೋವಿಂದ್ ಭರವಸೆ

Update: 2018-12-11 17:22 GMT

ನೇ ಪಿ ಟಾವ್ (ಮ್ಯಾನ್ಮಾರ್), ಡಿ. 11: ಮ್ಯಾನ್ಮಾರ್ ‘ಸವಾಲಿನ ಸಮಯ’ವನ್ನು ಎದುರಿಸುತ್ತಿದೆ ಎಂಬುದನ್ನು ಮಂಗಳವಾರ ಒಪ್ಪಿಕೊಂಡಿರುವ ಭಾರತ, ಆ ದೇಶದ ರಾಷ್ಟ್ರೀಯ ಶಾಂತಿ ಪ್ರಕ್ರಿಯೆಗೆ ಸಂಪೂರ್ಣ ಬೆಂಬಲ ನೀಡುವ ಪಣ ತೊಟ್ಟಿದೆ.

ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮ್ಯಿಂಟ್ ಮತ್ತು ಸರಕಾರಿ ಸಲಹೆಗಾರ್ತಿ ಆಂಗ್ ಸಾನ್ ಸೂ ಕಿ ಜೊತೆ ನಡೆಸಿದ ವ್ಯಾಪಕ ಶ್ರೇಣಿಯ ಮಾತುಕತೆಯ ವೇಳೆ, ಆ ದೇಶದ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಭರವಸೆಗಳನ್ನು ನೀಡಿದರು.

ಐದು ದಿನಗಳ ಭೇಟಿಗಾಗಿ ಸೋಮವಾರ ಇಲ್ಲಿಗೆ ಆಗಮಿಸಿದ ರಾಷ್ಟ್ರಪತಿಗೆ ಅಧ್ಯಕ್ಷೀಯ ಅರಮನೆಯಲ್ಲಿ ಗೌರವರಕ್ಷೆಯ ಸ್ವಾಗತ ನೀಡಲಾಯಿತು.

‘‘ರಾಷ್ಟ್ರಪತಿ ಕೋವಿಂದ್ ನೇತೃತ್ವದ ನಿಯೋಗವು ಮ್ಯಾನ್ಮಾರ್ ಅಧ್ಯಕ್ಷ ಯು ವಿನ್ ಮ್ಯಿಂಟ್ ಜೊತೆ ಮಾತುಕತೆಗಳನ್ನು ನಡೆಸಿತು. ಮ್ಯಾನ್ಮಾರ್ ಜೊತೆಗಿನ ಸಂಬಂಧಕ್ಕೆ ಭಾರತ ವಿಶೇಷ ಆದ್ಯತೆ ನೀಡುವುದೆಂದು ರಾಷ್ಟ್ರಪತಿ ಹೇಳಿದರು. ಭಾರತದ ‘ಪೂರ್ವದ ದೇಶಗಳೊಂದಿಗೆ ವ್ಯವಹರಿಸುವ’ ಮತ್ತು ‘ನೆರೆಕರೆ ಪ್ರಥಮ’ ನೀತಿಗಳಲ್ಲಿ ಮ್ಯಾನ್ಮಾರ್ ಪ್ರಮುಖ ಭಾಗೀದಾರ ದೇಶವಾಗಿದೆ’’ ಎಂದು ರಾಷ್ಟ್ರಪತಿಯ ಕಚೇರಿ ಮಾಡಿದ ಟ್ವೀಟ್‌ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News