ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ: ಪಾಕಿಸ್ತಾನ ಕಪ್ಪು ಪಟ್ಟಿಗೆ

Update: 2018-12-12 16:16 GMT

ವಾಶಿಂಗ್ಟನ್, ಡಿ. 12: ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ದೇಶಗಳನ್ನೊಳಗೊಂಡ ಕಪ್ಪುಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿರುವುದಾಗಿ ಅಮೆರಿಕ ಮಂಗಳವಾರ ಹೇಳಿದೆ.

ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಸಲ್ಲಿಸಬೇಕಾಗಿರುವ ವಾರ್ಷಿಕ ವರದಿಯಲ್ಲಿ ‘ನಿರ್ದಿಷ್ಟ ಕಳವಳಕಾರಿ ದೇಶಗಳು’ ಪಟ್ಟಿಗೆ ನಾನು ಪಾಕಿಸ್ತಾನವನ್ನು ಸೇರಿಸಿದ್ದೇನೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ತಿಳಿಸಿದರು.

ಇದಕ್ಕೂ ಮುನ್ನ ಒಂದು ವರ್ಷದ ಅವಧಿಗೆ ಅಮೆರಿಕ ಪಾಕಿಸ್ತಾನವನ್ನು ‘ನಿಗಾಪಟ್ಟಿ’ಯಲ್ಲಿಟ್ಟಿತ್ತು. ‘ನಿಗಾಪಟ್ಟಿ’ಯಲ್ಲಿರುವ ದೇಶಗಳು ಯಾವುದೇ ಕಾನೂನು ಪರಿಣಾಮಗಳನ್ನು ಎದುರಿಸುವುದಿಲ್ಲ.

ಹಿಂದೂಗಳು, ಶಿಯಾ, ಅಹ್ಮದೀಯರು ಮತ್ತು ಕ್ರೈಸ್ತರು ಸೇರಿದಂತೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಮಾನವಹಕ್ಕುಗಳ ಕಾರ್ಯಕರ್ತರು ಹಿಂದಿನಿಂದಲೂ ಕಳವಳ ವ್ಯಕ್ತಪಡಿಸುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಪಾಕ್ ಪ್ರತಿಭಟನೆ

ಧಾರ್ಮಿಕ ಸ್ವಾತಂತ್ರವನ್ನು ಉಲ್ಲಂಘಿಸುವ ದೇಶಗಳ ಕಪ್ಪು ಪಟ್ಟಿಗೆ ಅಮೆರಿಕ ತನ್ನನ್ನು ಸೇರಿಸಿರುವುದನ್ನು ಪಾಕಿಸ್ತಾನ ಬುಧವಾರ ಪ್ರತಿಭಟಿಸಿದೆ. ಇದು ‘ಏಕಪಕ್ಷೀಯ ಹಾಗೂ ರಾಜಕೀಯ ಪ್ರೇರಿತ’ ಕ್ರಮವಾಗಿದೆ ಎಂದು ಅದು ಬಣ್ಣಿಸಿದೆ.

‘‘ಅಮೆರಿಕವು ತನ್ನ ವಾರ್ಷಿಕ ಧಾರ್ಮಿಕ ಸ್ವಾತಂತ್ರ ವರದಿಯ ಕಪ್ಪುಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿರುವುದನ್ನು ಪಾಕಿಸ್ತಾನ ತಿರಸ್ಕರಿಸುತ್ತದೆ’’ ಎಂದು ಪಾಕಿಸ್ತಾನದ ವಿದೇಶ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News