‘ಮರಳು ಪರವಾನಿಗೆದಾರರಿಗೆ ಶಾಸಕ ರಘುಪತಿ ಭಟ್ ತಡೆ’

Update: 2018-12-12 16:44 GMT

 ಉಡುಪಿ, ಡಿ.12: ಜಿಲ್ಲಾಡಳಿತ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ಉಡುಪಿ ಮತ್ತು ಬ್ರಹ್ಮಾವರ ತಾಲೂಕುಗಳ 5 ಮರಳು ದಿಬ್ಬ ತೆರವಿಗೆ ಪರವಾನಿಗೆ ಕೋರಿರುವ 45 ಮಂದಿಯಲ್ಲಿ 11 ಮಂದಿಗೆ ಈಗಾಗಲೇ ಮರಳು ತೆಗೆಯಲು ಪರವಾನಿಗೆ ನೀಡಿದೆ. ಆದರೆ ಪರವಾನಿಗೆ ಪಡೆದವರು ಮರಳು ತೆಗೆದು ವಿತರಿಸದಂತೆ ಉಡುಪಿ ಶಾಸಕರು ತನ್ನ ಚೇಲಾಗಳ ಮೂಲಕ ತಡೆಯೊಡ್ಡುತಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಬುಧವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲೆಯ ಮರಳು ಅಭಾವದ ಬಗ್ಗೆ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ಶಾಸಕರ ಈ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಜಿಲ್ಲೆಯ ಜನ ಮರಳಿಲ್ಲದೆ ಮನೆ ಯಾ ಕಟ್ಟಡ ನಿರ್ಮಿಸಲಾಗದೆ ಸಂಕಷ್ಟ ದಲ್ಲಿರುವ ಸಂದರ್ಭದಲ್ಲಿ ಮರಳು ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಣೆಗೆ ಉದ್ಯೋಗ ಸಿಗುವಂತಾಗಲು ಜಿಲ್ಲಾಧಿಕಾರಿಗಳು ತಕ್ಷಣ ಸಿಆರ್‌ಝಡ್ ಹಾಗೂ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆದು ವಿತರಿಸುವ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಆಗ್ರಹಿಸಿದೆ.

ಪ್ರಮೋದ್ ಮಧ್ವರಾಜ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ಮರಳನ್ನು ತೆಗೆಯಲು 165 ಪರವಾನಿಗೆಯನ್ನು ನೀಡುವುದರ ಮೂಲಕ 28 ಬ್ಲಾಕ್‌ಗಳಲ್ಲಿ ಮರಳನ್ನು ತೆಗೆಯುವ ವ್ಯವಸ್ಥೆಯನ್ನು ಮಾಡಿದ್ದರು. ಸುಮಾರು 9 ಲಕ್ಷ ಟನ್ ಮರಳನ್ನು ತೆಗೆಯಲು ಅವಕಾಶ ನೀಡಲಾಗಿತ್ತು. ಇದರಲ್ಲಿ ಸುಮಾರು 6 ಲಕ್ಷ ಟನ್ ಮರಳನ್ನು ತೆಗೆಯಲಾಗಿತ್ತು.

ಜಿಲ್ಲೆಯ ಮರಳು ಹೊರ ಜಿಲ್ಲೆಗೆ ಯಾ ರಾಜ್ಯಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮದಿಂದ ಉಡುಪಿ ಜಿಲ್ಲೆಯ ಜನತೆಗೆ ಅತ್ಯಂತ ಕಡಿಮೆ ದರದಲ್ಲಿ ಮರಳು ಸಿಕ್ಕಿತ್ತು. ಕಳೆದ ವರ್ಷ ಅ.14ರಿಂದ ಮರಳು ಜನರಿಗೆ ಸಿಗಲು ಪ್ರಾರಂಭವಾಗಿ ದ್ದರೆ, ಈ ಬಾರಿ ಜನರಿಗೆ ಇನ್ನೂ ಮರಳು ದೊರೆಯುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ತಾನು ಶಾಸಕನಾದ ಒಂದು ತಿಂಗಳಲ್ಲೇ ಮರಳು ಸಮಸ್ಯೆಯನ್ನು ವಿಲೇವಾರಿ ಮಾಡುವ ಆಶ್ವಾಸನೆ ನೀಡಿದ್ದ ಭಟ್, ಶಾಸಕರಾಗಿ ಆರೇಳು ತಿಂಗಳು ಕಳೆದರೂ ಇಂದಿಗೂ ಮರಳು ಸಮಸ್ಯೆಯನ್ನು ವಿಲೇವಾರಿ ಮಾಡಲು ವಿಫಲರಾಗಿದ್ದಾರೆ ಎಂದು ಸಭೆ ಅಭಿಪ್ರಾಯಪಟ್ಟಿತು.

ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಜಿಲ್ಲಾ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಯತೀಶ್ ಕರ್ಕೆರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಉಡುಪಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಎಸ್‌ಸಿ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಎಸ್.ಟಿ. ಘಟಕದ ಅಧ್ಯಕ್ಷ ಅನಂತ್ ನಾಯ್ಕೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ತಾಪಂ ಸದಸ್ಯ ಧನಂಜಯ ಕುಂದರ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫಿಕ್ ದೊಡ್ಡಣಗುಡ್ಡೆ, ಬ್ಲಾಕ್ ಇಂಟಕ್ ಅಧ್ಯಕ್ಷ ನವೀನ್ ಶೆಟ್ಟಿ, ಜಿಲ್ಲಾ ಇಂದಿರಾ ಪ್ರಿಯದರ್ಶಿನಿ ಸಮಿತಿಯ ಅಧ್ಯಕ್ಷ ಅದಿತಿ ಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News